
ಕಳೆದ ಐದು ವರ್ಷಗಳಲ್ಲಿ ಭಾರತದಿಂದ ಹಣ್ಣುಗಳ ರಫ್ತು ಪ್ರಮಾಣವು ಶೇ. 47.5 ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಯುಎಇ ಮತ್ತು ಆಸ್ಟ್ರೇಲಿಯಾದ ಜೊತೆಗೆ ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವು ಹಣ್ಣುಗಳ ರಫ್ತು ಪ್ರಮಾಣದ ಹೆಚ್ಚಳಕ್ಕೆ ನೆರವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತದಿಂದ ಪ್ರಮುಖವಾಗಿ ದ್ರಾಕ್ಷಿ, ಬಾಳೆಹಣ್ಣು, ಸೇಬು, ಅನಾನಸ್, ದಾಳಿಂಬೆ ಮತ್ತು ಕಲ್ಲಂಗಡಿಯನ್ನು ರಫ್ತು ಮಾಡಲಾಗುತ್ತದೆ. ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಹಣ್ಣುಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ.
ಭಾರತದಿಂದ ನಡೆಯುತ್ತಿರುವ ತಾಜಾ ಹಣ್ಣಿನ ರಫ್ತು ವಹಿವಾಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಕಳೆದ 9 ತಿಂಗಳ ಅವಧಿಯಲ್ಲಿ ಅಂದರೆ 2023ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುವ ತಾಜಾ ಹಣ್ಣಿನ ಸಾಗಣೆಯಲ್ಲಿ ಶೇ 29ರಷ್ಟು ಏರಿಕೆ ಕಂಡಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಇತ್ತೀಚಿನ ದತ್ತಾಂಶ ತಿಳಿಸಿದೆ.
ಭಾರತದಿಂದ ಹಣ್ಣುಗಳು ರಫ್ತಾಗುತ್ತಿರುವ ವಿದೇಶಗಳ ಸಂಖ್ಯೆ ಕೂಡ ವಿಸ್ತಾರಗೊಂಡಿದೆ. ಹಿಂದಿನ ವರ್ಷದಲ್ಲಿ 102 ದೇಶದಲ್ಲಿ ಈ ರಫ್ತು ವಹಿವಾಟು ನಡೆಯುತ್ತಿದ್ದು, ಆದರೆ, ಇದೀಗ 111 ದೇಶಗಳಿಗೆ ಭಾರತದಿಂದ ತಾಜಾ ಹಣ್ಣುಗಳನ್ನು ರಫ್ತು ಮಾಡಲಾಗುತ್ತಿದೆ.
ಹಿಂದಿನ ವರ್ಷದ ದತ್ತಾಂಶಕ್ಕೆ ಹೋಲಿಕೆ ಮಾಡಿದಾಗ 2023ರ ಏಪ್ರಿಲ್ನಿಂದ ನವೆಂಬರ್ನಲ್ಲಿ ಅನೇಕ ಪ್ರಮುಖ ಸರಕುಗಳ ರಫ್ತು ವಹಿವಾಟಿನಲ್ಲಿ ಸುಸ್ಥಿರ ಬೆಳವಣಿಗೆ ಕಂಡುಬಂದಿದೆ. ಬಾಳೆಹಣ್ಣು ಶೇ 63ರಷ್ಟು, ಕೇಸರ್ ಮತ್ತು ದಶೇರಿ ಮಾವಿನಹಣ್ಣಿನಲ್ಲಿ ಕ್ರಮವಾಗಿ 120 ಮತ್ತು 140ರಷ್ಟು ರಫ್ತು ಹೆಚ್ಚಾಗಿದೆ. 2022-23ರಲ್ಲಿ ಭಾರತದ ರಫ್ತು 53.1 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತು. ಇದರ ಜೊತೆಗೆ ಎಪಿಇಡಿಎ ಸರಕು ಸಾಗಣೆ ಕೂಡ ಭಾರತದ ರಫ್ತಿನಲ್ಲಿ ಶೇ 51ರಷ್ಟು ಕೊಡುಗೆ ನೀಡಿದೆ.
ಈ ಬೆಳವಣಿಗೆ ಭಾರತದ ಕೃಷಿ ರಫ್ತು ವಲಯಕ್ಕೆ ಹೊಸ ಉತ್ತೇಜನ ನೀಡಿದೆ. ಭಾರತದ ಹಣ್ಣುಗಳು ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿವೆ.