ಕರೂರು: ದೇಶದಲ್ಲಿ ಕೋವಿಡ್ -19 ಲಸಿಕೆಯನ್ನು ಇನ್ನೂ ಹಲವಾರು ಮಂದಿ ಹಾಕಿಸಿಕೊಂಡಿಲ್ಲ. ಲಸಿಕೆ ಹಾಕಿಸುವಂತೆ ಸರ್ಕಾರಗಳು, ಸಂಘಸಂಸ್ಥೆಗಳು ಅಭಿಯಾನ ನಡೆಸುತ್ತಿವೆ. ತಮಿಳುನಾಡಿನ ಕರೂರ್ ಜಿಲ್ಲಾಡಳಿತವು, ಲಸಿಕೆ ಪಡೆದ ಜನರಿಗೆ ಆಕರ್ಷಕ ಉಡುಗೊರೆಗಳನ್ನು ನೀಡಲು ಮುಂದಾಗಿದೆ.
ಈ ಭಾನುವಾರ ಮೆಗಾ ವ್ಯಾಕ್ಸಿನೇಷನ್ ಶಿಬಿರದಲ್ಲಿ ಕೋವಿಡ್ -19 ಲಸಿಕೆ ಪಡೆದ ನಂತರ ಜನರು ವಾಷಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್, ಪ್ರೆಶರ್ ಕುಕ್ಕರ್ ಅಥವಾ ಇತರ ಪಾತ್ರೆಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.
18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಲು ಇದು ರಾಜ್ಯದಲ್ಲಿ ನಡೆಯುತ್ತಿರುವ ಐದನೇ ಮೆಗಾ ಲಸಿಕೆ ಅಭಿಯಾನವಾಗಿದೆ. ವಿಶೇಷವಾಗಿ, ಜಿಲ್ಲೆಯ ಲಸಿಕಾ ಕೇಂದ್ರಗಳಲ್ಲಿ ಜಿಲ್ಲಾ ಆಡಳಿತವು ಲಸಿಕೆ ಹಾಕುವ ಎಲ್ಲರಿಗೂ ಲಕ್ಕಿ ಡ್ರಾ ನಡೆಸಿ, ಉಡುಗೊರೆಗಳನ್ನು ನೀಡಲು ಮಂದಾಗಿದೆ.
ಕರೂರು ಜಿಲ್ಲಾಧಿಕಾರಿ ಟಿ. ಪ್ರಭುಶಂಕರ್, “ತಮಿಳುನಾಡು ರಾಜ್ಯ ಸರ್ಕಾರದ ಬೃಹತ್ ಲಸಿಕಾ ಅಭಿಯಾನದ ಭಾಗವಾಗಿ ಜಿಲ್ಲಾಡಳಿತ ಭಾನುವಾರ ಲಸಿಕೆ ಹಾಕುವ ಎಲ್ಲರಿಗೂ ಲಕ್ಕಿ ಡ್ರಾ ನಡೆಸುತ್ತದೆ ಮತ್ತು ವಿಜೇತರಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಶಿಬಿರಗಳಿಗೆ ಲಸಿಕೆಗಾಗಿ ಜನರನ್ನು ಕರೆತರುವ ಸ್ವಯಂ ಸೇವಕರಿಗೆ ರೂ.5 ಪ್ರೋತ್ಸಾಹ ಧನ ನೀಡಲಾಗುವುದು” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಲಕ್ಕಿ ಡ್ರಾದಲ್ಲಿ ವಾಷಿಂಗ್ ಮೆಷಿನ್ ಮೊದಲ ಬಹುಮಾನವಾಗಿದ್ದು, ಎರಡನೇ ಬಹುಮಾನ ವೆಟ್ ಗ್ರೈಂಡರ್ ಮತ್ತು ಮೂರನೇಯದು ಮಿಕ್ಸರ್ ಗ್ರೈಂಡರ್ ಆಗಿರುತ್ತದೆ. ಪ್ರೆಶರ್ ಕುಕ್ಕರ್‌ಗಳನ್ನು ಉಡುಗೊರೆಯಾಗಿ ನೀಡುವುದರೊಂದಿಗೆ, 24 ಬಹುಮಾನಗಳನ್ನು ನೀಡಲಾಗುವುದು. 100 ಸಮಾಧಾನಕರ ಬಹುಮಾನ ಇರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಶಿಬಿರಕ್ಕೆ 25 ಕ್ಕೂ ಹೆಚ್ಚು ಜನರನ್ನು ಕರೆತರುವ ಸ್ವಯಂಸೇವಕರ ಹೆಸರುಗಳನ್ನು ಲಕ್ಕಿ ಡ್ರಾದಲ್ಲಿ ಸೇರಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ. ರಾಜ್ಯ ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಅವರು ಕರೂರ್ ಜಿಲ್ಲಾಡಳಿತವು ಹೆಚ್ಚಿನ ಜನರಿಗೆ ಲಸಿಕೆ ಹಾಕುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.