
ಪ್ರಸ್ತುತ ಲೋಕಸಭೆ ಚುನಾವಣೆ 2024 ರಲ್ಲಿ ಘಟಾವುಘಟಿಗಳೆಲ್ಲಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಜೂನ್ 4 ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಘಟಾನುಘಟಿ ನಾಯಕರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಅಚ್ಚರಿಯ ಅಂಶಗಳು ಗೊತ್ತಾಗಿವೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಘಟಾನುಘಟಿ ನಾಯಕರ ಬಳಿ ಒಂದು ಸ್ವಂತ ಕಾರು ಸಹ ಇಲ್ಲ ಎಂಬುದು ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಗೊತ್ತಾಗಿದೆ.
ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಲು ಬಯಸಿರುವ ಪ್ರಧಾನಿ ಮೋದಿ ಅವರು ಮಂಗಳವಾರ ಮೇ 14 ರಂದು ಚುನಾವಣಾ ನಾಮಪತ್ರ ಸಲ್ಲಿಸಿದರು. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಅವರು ಒಟ್ಟು 3 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಆದರೆ ಯಾವುದೇ ಜಮೀನು, ಮನೆ ಅಥವಾ ಕಾರು ಹೊಂದಿಲ್ಲ.
ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಸ್ತಿ 36 ಕೋಟಿ ರೂ. ಈ ವರ್ಷದ ಮಾರ್ಚ್‌ನಲ್ಲಿ ಅಮಿತ್ ಶಾ ಅವರ ಅಧಿಕೃತ ಕಾರಿನ ‘DL1 CAA 4421’ ನಂಬರ್ ಪ್ಲೇಟ್‌ನ ವಿಡಿಯೋ ವೈರಲ್ ಆಗಿತ್ತು. ಆದರೆ ಅಫಿಡವಿಟ್ ಪ್ರಕಾರ ಅವರು ವೈಯಕ್ತಿಕವಾಗಿ ಕಾರು ಹೊಂದಿಲ್ಲ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋ ಲೋಕಸಭಾ ಕ್ಷೇತ್ರದಿಂದ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಅವರು 6.36 ಕೋಟಿ. ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ . ರಿವಾಲ್ವರ್ ಮತ್ತು ಡಬಲ್ ಬ್ಯಾರೆಲ್ ಗನ್ ಹೊಂದಿರುವ ರಾಜನಾಥ್ ಸಿಂಗ್ ಅವರು ಸ್ವಂತ ಕಾರನ್ನು ಹೊಂದಿಲ್ಲ.
ಕೇರಳದ ವಯನಾಡ್ ಕ್ಷೇತ್ರ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 20 ಕೋಟಿ ರೂ. ಮೌಲ್ಯದ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಆದರೆ ಅವರು ಯಾವುದೇ ವಾಹನ, ವಸತಿ ಫ್ಲಾಟ್ ಹೊಂದಿಲ್ಲ.
ಉತ್ತರ ಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಸ್ತಿ ಮೌಲ್ಯ 26.34 ಕೋಟಿ ರೂ. ಆದರೆ ಅವರು ಸ್ವಂತ ಕಾರು ಹೊಂದಿಲ್ಲ.
ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಅವರ ಆಸ್ತಿ ಮೌಲ್ಯ 15 ಕೋಟಿ ರೂ. ತನ್ನ ಗಂಡನಂತೆಯೇ, ಅವರು ಸ್ವಂತ ಕಾರು ಹೊಂದಿಲ್ಲ.
ಕೇರಳದ ತಿರುವನಂತಪುರ ಕ್ಷೇತ್ರದಿಂದ ಕಾಂಗ್ರೆಸ್‌ನ ಶಶಿ ತರೂರ್ ಅವರನ್ನು ಎದುರಿಸುತ್ತಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು 23.65 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಅವರ ಹೆಸರಿನಲ್ಲಿ ಯಾವುದೇ ವಾಹನ ನೋಂದಣಿಯಾಗಿಲ್ಲ.
ಕರ್ನಾಟಕದ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಅವರ ಒಟ್ಟು ಆಸ್ತಿ ಸುಮಾರು ರೂ. 217.21 ಕೋಟಿ. ತಮ್ಮ ಶ್ರೀಮಂತಿಕೆಯ ಹೊರತಾಗಿಯೂ, ಕರ್ನಾಟಕದ ಮಾಜಿ ಸಿಎಂ ಅವರು ಟ್ರ್ಯಾಕ್ಟರ್ ಹೊಂದಿದ್ದರೂ ಸ್ವಂತ ಕಾರು ಹೊಂದಿಲ್ಲ.
15 ವರ್ಷಗಳ ಕಾಲ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಆಸ್ತಿ 3.21 ಕೋಟಿ ರೂ. ಶಿವರಾಜ್ ಸಿಂಗ್ ಚೌಹಾಣ್ ಸ್ವಂತ ಕಾರು ಹೊಂದಿಲ್ಲ ಆದರೆ ಅವರ ಪತ್ನಿ ಅಂಬಾಸಿಡರ್ ಕಾರು ಹೊಂದಿದ್ದಾರೆ.
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಪ್ರಸ್ತುತ ಕರ್ನಾಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು 1.27 ಕೋಟಿ ರೂ. ಆಸ್ತಿ ಹೊಂದಿರುವ ಅವರ ಬಳಿ ಸ್ವಂತ ಕಾರು ಹೊಂದಿಲ್ಲ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ತೆಲಂಗಾಣದ ಹೈದರಾಬಾದ್ ಕ್ಷೇತ್ರದಿಂದ ಐದನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಲು ಬಯಸಿದ್ದು ಕಾರು ಹೊಂದಿಲ್ಲ. ಚುನಾವಣಾ ಅಫಿಡವಿಟ್ ಪ್ರಕಾರ ಅವರ ಆಸ್ತಿ ಮೌಲ್ಯ 23 ಕೋಟಿ ರೂ.
ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದ ಕೊಂಪೆಲ್ಲಾ ಮಾಧವಿ ಲತಾ ಅವರು ರಾಜ್ಯದ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರು. 220 ಕೋಟಿ ರೂ ಆಸ್ತಿ ಹೊಂದಿರುವ ಅವರ ಬಳಿ ಚುನಾವಣಾ ಅಫಿಡವಿಟ್ ಪ್ರಕಾರ ಆಕೆಗೂ ಸ್ವಂತ ಕಾರು ಇಲ್ಲ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಪುತ್ರಿ ಮತ್ತು ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಎನ್‌ಸಿಪಿ-ಎಸ್‌ಪಿ ಅಭ್ಯರ್ಥಿಯಾಗಿರುವ ಸುಪ್ರಿಯಾ ಸುಳೆ ಅವರ ಒಟ್ಟು ಆಸ್ತಿ 166.5 ಕೋಟಿ ರೂ. ಅಚ್ಚರಿಯ ಸಂಗತಿ ಎಂದರೆ ಆಕೆಯ ಹೆಸರಲ್ಲಿ ಕಾರು ನೋಂದಣಿಯಾಗಿಲ್ಲ.












