alex Certify ಹೃದಯಾಘಾತದಿಂದ ಹಿಡಿದು ಸಕ್ಕರೆ ಕಾಯಿಲೆವರೆಗೆ; ಕಡಿಮೆ ನಿದ್ದೆ ಮಾಡುವುದರಿಂದ ಕಾಡುತ್ತೆ ಹತ್ತಾರು ಸಮಸ್ಯೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತದಿಂದ ಹಿಡಿದು ಸಕ್ಕರೆ ಕಾಯಿಲೆವರೆಗೆ; ಕಡಿಮೆ ನಿದ್ದೆ ಮಾಡುವುದರಿಂದ ಕಾಡುತ್ತೆ ಹತ್ತಾರು ಸಮಸ್ಯೆ…..!

ಕೆಲಸದ ಒತ್ತಡ ಎಲ್ಲರಿಗೂ ಸಾಮಾನ್ಯ. ಆದರೆ ಅನೇಕರಿಗೆ ಪ್ರತಿನಿತ್ಯ ದೇಹ ಮತ್ತು ಮನಸ್ಸಿಗೆ ಅಗತ್ಯವಾದ ನಿದ್ರೆಯನ್ನು ಪೂರ್ಣಗೊಳಿಸಲು ಸಹ ಸಮಯವಿಲ್ಲ. ತಡವಾಗಿ ಮನೆಗೆ ಬರುವ ಮೂಲಕ ಮತ್ತು ಬೆಳಗ್ಗೆ ಬೇಗನೆ ಕಚೇರಿಗೆ ಹೊರಡುವ ಮೂಲಕ ಅನೇಕರು ನಿದ್ದೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುತ್ತ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ಅಗತ್ಯಕ್ಕಿಂತ ಕಡಿಮೆ ನಿದ್ದೆ ಮಾಡುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ರಾತ್ರಿ ತಡವಾಗಿ ಮಲಗುವುದು ನಿಮ್ಮ ದಿನಚರಿಯ ಭಾಗವಾಗಿದ್ದರೆ  ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಆದ್ದರಿಂದ ತಡವಾಗಿ ಮಲಗುವುದು ಅಥವಾ ಕಡಿಮೆ ನಿದ್ರೆ ಮಾಡುವುದರಿಂದ ಉಂಟಾಗುವ ಅನಾನುಕೂಲಗಳು ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು.

ಮೆದುಳಿನ ಮೇಲೆ ಪರಿಣಾಮ

ತಡವಾಗಿ ಮಲಗುವುದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡದಿಂದ ಯಾವುದೇ ವಿಷಯದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಕುಗ್ಗಿಹೋಗಬಹುದು.

ಹೃದಯಾಘಾತ ಮತ್ತು ಸ್ಥೂಲಕಾಯತೆಯ ಅಪಾಯ

ಸಾಕಷ್ಟು ನಿದ್ರೆ ಮಾಡದಿದ್ದರೆ ಹೃದಯಾಘಾತ, ಮಧುಮೇಹ ಮತ್ತು ಬೊಜ್ಜು ಮುಂತಾದ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಸಾಕಷ್ಟು ನಿದ್ದೆ ಬರದಿದ್ದರೆ ಮರುದಿನ ಕಿರಿಕಿರಿ, ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಏಕಾಗ್ರತೆಯ ಕೊರತೆ

ವಿದ್ಯಾರ್ಥಿಗಳಿಗೆ ನಿದ್ರೆಯ ಕೊರತೆಯಿಂದ ಏಕಾಗ್ರತೆಯ ಸಮಸ್ಯೆಯಾಗುತ್ತದೆ. ಇದರಿಂದ ಓದುವುದು ಕಷ್ಟವಾಗಬಹುದು. ನಿದ್ರೆ ಕಡಿಮೆ ಮಾಡುವುದರಿಂದ ಶಿಕ್ಷಕರ ಬೋಧನಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.

ಉತ್ತಮ ನಿದ್ರೆಗಾಗಿ ಏನು ಮಾಡಬೇಕು?

ನಿದ್ದೆಯ ಸಮಯ ನಿಗದಿ

ಕಣ್ತುಂಬಾ ನಿದ್ದೆ ಮಾಡಲು ಕೆಲವೊಂದು ಸರಳ ಕ್ರಮಗಳನ್ನು ಅನುಸರಿಸಬೇಕು. ಉತ್ತಮ ನಿದ್ರೆಗಾಗಿ ರಾತ್ರಿ ಮಲಗುವ  ಸಮಯವನ್ನು ಮೊದಲು ನಿಗದಿಪಡಿಸಿ. ಉದಾಹರಣೆಗೆ ರಾತ್ರಿ 10 ಗಂಟೆಗೆ ಮಲಗಿದರೆ, ಮರುದಿನ ಬೆಳಿಗ್ಗೆ 6 ಗಂಟೆಗೆ ಏಳುವುದರನ್ನು ರೂಢಿ ಮಾಡಿಕೊಳ್ಳಿ. ಸುಮಾರು 8 ಗಂಟೆಗಳ ನಿದ್ದೆ ತೆಗೆದುಕೊಳ್ಳಿ.

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ದೂರವಿರಿ

ರಾತ್ರಿ ಮಲಗಲು ತೆರಳುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿ. ಇವು ನಿದ್ದೆಗೆ ಅಡ್ಡಿಪಡಿಸುತ್ತವೆ. ರಾತ್ರಿ ಮಲಗಲು ಸ್ವಚ್ಛವಾದ ಹಾಸಿಗೆಯನ್ನು ತಯಾರಿಸಿ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ಉತ್ತಮ ನಿದ್ರೆಗಾಗಿ ಧ್ಯಾನ ಮತ್ತು ಯೋಗವನ್ನು ಸಹ ಮಾಡಬಹುದು. ರಾತ್ರಿ ಲಘು ಆಹಾರ ಸೇವಿಸಿ. ತಿಂದ ನಂತರ ಸ್ವಲ್ಪ ಸಮಯ ವಾಕಿಂಗ್‌ ಮಾಡುವುದರಿಂದ ಸುಖವಾದ ನಿದ್ದೆ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...