ಅಮೆರಿಕ ಪ್ರವಾಸದಲ್ಲಿ ಪ್ರಧಾನಿ: ವಿದೇಶಿ ನಾಯಕರಿಗೆ ಅಮೂಲ್ಯ ಉಡುಗೊರೆ ನೀಡಿದ ‘ನಮೋ’ 24-09-2021 5:20PM IST / No Comments / Posted In: Latest News, India, Live News ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿರುವ ಭಾರತ, ವಿದೇಶಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಸದ್ಯ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ. ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಜೊತೆಗಿನ ಮಹತ್ವದ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಪ್ರತಿಯೊಬ್ಬರಿಗೂ ಸ್ಮರಣೀಯ ಉಡುಗೊರೆಗಳನ್ನು ನೀಡಿದ್ದಾರೆ. ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರಿಗೆ ಬಹಳ ಯೋಗ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು..! ಎಲ್ಲರಿಗೂ ತಿಳಿದಿರುವಂತೆ ಕಮಲಾ ಹ್ಯಾರಿಸ್ ತಾತ ತಮಿಳುನಾಡಿನ ತುಳಸೇಂದ್ರಪುರಂನವರು. ಹೀಗಾಗಿ ಕಮಲಾ ಹ್ಯಾರಿಸ್ ತಾತ ಪಿ ವಿ ಗೋಪಾಲನ್ ಅವರಿಗೆ ಸಂಬಂಧಿಸಿ ಹಳೆಯ ಅಧಿಸೂಚನೆಗಳ ಪ್ರತಿಯನ್ನು ಫ್ರೇಮ್ನಲ್ಲಿ ಹಾಕಿ ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಕಮಲಾ ಹ್ಯಾರಿಸ್ ತಾತ ಪಿ ವಿ ಗೋಪಾಲನ್ ಬ್ರಿಟೀಷರ ಅಧಿಕಾರಾವಧಿಯಲ್ಲಿ ಭಾರತದ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. ಇದರ ಜೊತೆಯಲ್ಲಿ ಕಮಲಾ ಹ್ಯಾರಿಸ್ಗೆ ಪ್ರಧಾನಿ ಮೋದಿ ಗುಲಾಬಿ ಮೀನಾಕರಿ ಚೆಸ್ ಸೆಟ್ನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಗುಲಾಬಿ ಮೀನಾಕರಿಯು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಕಾಶಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಇದು ಪ್ರಧಾನಿ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾಗಿದೆ. ಚದುರಂಗದ ಪ್ರತಿಯೊಂದು ಕಾಯಿಗಳು ಗಮನಾರ್ಹವಾದ ಕರಕುಶಲವನ್ನು ಹೊಂದಿವೆ. ಗಾಢವಾದ ಬಣ್ಣಗಳು ಕಾಶಿಯ ವೈಭೋಗವನ್ನು ಪ್ರತಿನಿಧಿಸುತ್ತಿವೆ. ಇನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ಗೆ ಪ್ರಧಾನಿ ಮೋದಿ ಬೆಳ್ಳಿಯ ಗುಲಾಬಿ ಮೀನಾಕರಿ ಹಡಗಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹಡಗಿನ ಕಲಾಕೃತಿಯನ್ನೂ ಗಾಢವಾದ ಬಣ್ಣಗಳಿಂದಲೇ ಅಲಂಕರಿಸಲಾಗಿದೆ. ಇದು ಕೂಡ ಕಾಶಿಯ ಪುರಾತನ ವೈಭೋಗವನ್ನು ಪ್ರತಿನಿಧಿಸುವಂತಿದೆ. ಜಪಾನ್ ಪ್ರಧಾನಿ ಸುಗಾಗೆ ಪ್ರಧಾನಿ ಮೋದಿ ಶ್ರೀಗಂಧದ ಬುದ್ಧನ ವಿಗ್ರಹವನ್ನು ನೀಡಿದ್ದಾರೆ. ಜಪಾನ್ ಹಾಗೂ ಭಾರತದ ನಡುವಿನ ಸಂಬಂಧ ಸೇತುವೆಯಾಗಿ ಬೌದ್ಧ ಧರ್ಮ ನಿಂತಿದೆ. ಜಪಾನ್ನಲ್ಲಿ ಬುದ್ಧನ ಆಲೋಚನೆಗಳು ಹಾಗೂ ಸಂದೇಶಗಳಿಗೆ ತುಂಬಾನೇ ಮಹತ್ವವಿದೆ.