ಆಗಸ್ಟ್ ತಿಂಗಳು ಬಂತೆಂದ್ರೆ ಹಳೇ ಸ್ನೇಹಿತರೆಲ್ಲ ಒಂದಾಗ್ತಾರೆ. ಸ್ನೇಹಿತರ ದಿನಾಚರಣೆಗೆ ಸಿದ್ಧರಾಗ್ತಾರೆ. ನಿಷ್ಕಲ್ಮಶ ಸ್ನೇಹಕ್ಕೆ ಕೊನೆ ಇಲ್ಲ. ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಆಗಸ್ಟ್ 4 ರ ಇಂದು ಸ್ನೇಹಿತರ ದಿನವನ್ನು ಆಚರಿಸಲಾಗ್ತಿದೆ.
ಅನೇಕಾನೇಕ ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸುತ್ತ ಬರಲಾಗಿದೆ. ಸ್ನೇಹಿತರ ದಿನಾಚರಣೆ ಹೇಗೆ ಶುರುವಾಯ್ತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ಮೊದಲ ವಿಶ್ವಯುದ್ಧದ ನಂತ್ರ ಎಲ್ಲ ದೇಶಗಳ ಮಧ್ಯೆ ದ್ವೇಷ ಹೊಗೆಯಾಡುತ್ತಿತ್ತು. ಒಬ್ಬರನ್ನೊಬ್ಬರು ನಂಬುತ್ತಿರಲಿಲ್ಲ. ಹಗೆತನವನ್ನು ದೂರ ಮಾಡಲು ಅಮೆರಿಕಾ ಸರ್ಕಾರ 1935ರಲ್ಲಿ ಫ್ರೆಂಡ್ಶಿಪ್ ಡೇ ಶುರುಮಾಡ್ತು ಎನ್ನಲಾಗುತ್ತದೆ.
ಇನ್ನೊಂದು ಮಾಹಿತಿ ಪ್ರಕಾರ, ಆಗಸ್ಟ್ ಮೊದಲ ಭಾನುವಾರ ಅಮೆರಿಕಾ, ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿತ್ತಂತೆ. ಇದ್ರಿಂದ ಬೇಸರಗೊಂಡ ಆತನ ಸ್ನೇಹಿತ ಆತ್ಮಹತ್ಯೆಗೆ ಶರಣಾಗಿದ್ದನಂತೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತಂತೆ. ಅಮೆರಿಕಾ ಸರ್ಕಾರ ಜನರ ಮಾತಿಗೆ ಮನ್ನಣೆ ನೀಡಿ 21 ವರ್ಷಗಳ ನಂತ್ರ 1958ರಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಿತ್ತಂತೆ. ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವಾಗಿ ಆಚರಣೆ ಮಾಡಬೇಕೆಂದು ಘೋಷಣೆ ಮಾಡ್ತಂತೆ.
ಭಾನುವಾರ ಬಹುತೇಕರಿಗೆ ರಜೆ ಇರುವ ಕಾರಣ, ಸ್ನೇಹಿತರ ಜೊತೆ ಈ ದಿನವನ್ನು ಎಂಜಾಯ್ ಮಾಡಬಹುದು. ಹಾಗಾಗಿಯೇ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಯ್ಕೆ ಮಾಡಲಾಗಿದೆ.