ರಾಜ್ಯಾದ್ಯಂತ ಕೋಮು ಸೌಹಾರ್ದತೆಗೆ ಅಗ್ನಿ ಪರೀಕ್ಷೆ ಒಡ್ಡಿದ್ದ ಹಿಜಾಬ್ ವಿವಾದವು ದೇಶದ ಗಮನ ಸೆಳೆದ ಬಳಿಕ ಇದೀಗ ಶಾಲೆಗಳು ಪುನಾರಂಭಗೊಂಡಿದ್ದು, ವಿದ್ಯಾರ್ಥಿಗಳು ಮರಳಿ ತರಗತಿಗಳತ್ತ ಆಗಮಿಸುತ್ತಿದ್ದಾರೆ.
ಇದೇ ವೇಳೆ, ಈ ದೊಡ್ಡ ವಿವಾದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ, ವಿದ್ಯಾರ್ಥಿನಿಯರು ಕೋಮುಗಳ ಎಲ್ಲೆ ದಾಟಿ, ಸ್ನೇಹಿಶೀಲತೆ ಮೆರೆಯುವ ಮೂಲಕ ಪರಸ್ಪರರ ಕೈಹಿಡಿದುಕೊಂಡು ಶಾಲಾ-ಕಾಲೇಜುಗಳಿಗೆ ಮರಳುತ್ತಿರುವ ಅನೇಕ ಚಿತ್ರಗಳು ವೈರಲ್ ಆಗಿವೆ.
ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಹಿಜಾಬ್ ವಿವಾದದ ಕೇಂದ್ರ ಬಿಂದುವಾಗಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರನ್ನು ಅವರ ಹಿಂದೂ ಸ್ನೇಹಿತೆಯರು ಕೈಹಿಡಿದು ಕಾಲೇಜಿಗೆ ಕರೆ ತರುತ್ತಿದ್ದಾರೆ.
ಹಿಜಾಬ್‌ನಲ್ಲಿರುವ ತಮ್ಮ ಮುಸ್ಲಿಂ ಸ್ನೇಹಿತೆಯೊಂದಿಗೆ ಕೈ ಹಿಡಿದು ಶಾಲೆಗೆ ಬರುತ್ತಿರುವ ಮುಸ್ಲಿಮೇತರ ವಿದ್ಯಾರ್ಥಿನಿಯರ ಚಿತ್ರವೊಂದು ವೈರಲ್ ಆಗಿದೆ.
ಇದೇ ವೇಳೆ, ಮಂಡ್ಯದ ಸರ್ಕಾರಿ ಮಹಿಳೆಯರ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದ ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಆಗಮಿಸುವ ಮುನ್ನ ಹಿಜಾಬ್ ತೆಗೆದು ಒಳ ಬಂದಿದ್ದಾರೆ. ಇದಕ್ಕೆಂದು ಪ್ರತ್ಯೇಕ ಕೋಣೆ ಇಲ್ಲದೇ ಇರುವ ಕಾರಣ ವಿದ್ಯಾರ್ಥಿನಿಯರು ಸಾರ್ವಜನಿಕವಾಗಿಯೇ ಹಿಜಾಬ್ ತೆಗೆದಿಟ್ಟಿದ್ದಾರೆ.