ಬೆಳಗಾವಿ: ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವು ಕಂಡ ಘಟನೆ ನಡೆದಿದೆ. ಬೆಳಗಾವಿಯ ಖಾಸಭಾಗ ನಿವಾಸಿ ಮಹಾಂತೇಶ ಗುಂಜಿಕರ(22) ಮೃತಪಟ್ಟವರು.
20ಕ್ಕೂ ಹೆಚ್ಚು ಸ್ನೇಹಿತರ ಜೊತೆಗೆ ಮಹಾಂತೇಶ ರೆಸಾರ್ಟ್ ಗೆ ತೆರಳಿದ್ದ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಜಾಂಬೋಟಿ ಸಮೀಪದ ರೆಸಾರ್ಟ್ ಗೆ ಹೋಗಿದ್ದು, ಈಜುಕೊಳದಲ್ಲಿ ಮೃತಪಟ್ಟಿದ್ದಾನೆ ಎಂದು ಸ್ನೇಹಿತರು ಹೇಳಿದ್ದಾರೆ.
ಸ್ನೇಹಿತರು ಒಟ್ಟಿಗೆ ಇದ್ದಾಗ ಒಬ್ಬನೇ ಸತ್ತಿದ್ದು ಹೇಗೆ ಎಂದು ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಸ್ನೇಹಿತರೇ ಏನೋ ಮಾಡಿದ್ದಾರೆ ಎಂದು ಮಹಾಂತೇಶ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಾಂತೇಶನ ಶವ ಇರಿಸಲಾಗಿದೆ. ಪೊಲೀಸರ ಜೊತೆಗೆ ಮಹಾಂತೇಶನ ಪೋಷಕರು ಮತ್ತು ಸಂಬಂಧಿಕರು ವಾಗ್ವಾದ ನಡೆಸಿದ್ದಾರೆ. ಮಹಾಂತೇಶ ಜೊತೆಗಿದ್ದವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಶಹಾಪುರ ಪೊಲೀಸರು ಭರವಸೆ ನೀಡಿದ್ದಾರೆ.