ಚಿಕಾಗೋ: ಸೀರೆಯಿಂದ ಭಾರತೀಯ ನಾರಿಯರು ವಿಮುಖರಾಗುತ್ತಿದ್ದರೆ, ವಿದೇಶಿಗರು ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುತ್ತಿರುವುದು ಹೊಸ ವಿಷಯವಲ್ಲ. ಆದರೆ ಚಿಕಾಗೋದಲ್ಲಿ ವರನ ಸ್ನೇಹಿತರು ಸೀರೆಯುಟ್ಟು ಮದುವೆಗೆ ಬಂದಿರುವ ಅಪರೂಪದ ಘಟನೆ ನಡೆದಿದೆ. ಇದು ವಿಚಿತ್ರವೂ ಹೌದು. ಏಕೆಂದರೆ ಸೀರೆಯುಟ್ಟು ಬಂದವರು ಮಹಿಳೆಯರಲ್ಲ, ಬದಲಿಗೆ ಪುರುಷರು!
ಇದನ್ನು ನೋಡಿ ವರ ಅಚ್ಚರಿಯಷ್ಟೇ ಗೊಂದಲಕ್ಕೂ ಒಳಗಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಚಿಕಾಗೋ ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬರು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಮೂಲದ ಯುವಕನ ಮದುವೆ ಇದಾಗಿತ್ತು. ಸ್ನೇಹಿತರ ವೇಷ ನೋಡಿ ವರ ಮೊದಲು ದಂಗುಬಡಿದ. ಆದರೆ ಕ್ರಮೇಣ ಇವರ ಒಂದೊಂದು ಅಲಂಕಾರವನ್ನೂ ನೋಡುತ್ತ ನಗಲು ಶುರುಮಾಡಿದ್ದನ್ನು ಇದರಲ್ಲಿ ನೋಡಬಹುದು.
ಇವರಿಗೆ ಸೀರೆ ಉಡಿಸಲು ಸ್ಥಳೀಯ ಮಹಿಳೆಯೊಬ್ಬರು ಸಹಕರಿಸಿದ್ದಾರೆ. ಕಂಚೀ ರೇಷಿಮೆ ಸೀರೆಯನ್ನು ಇವರಿಬ್ಬರೂ ಉಟ್ಟಿದ್ದಾರೆ. ಮದುವೆಗೆ ಬಂದ ಜನರ ಗಮನ ಸೆಳೆಯಲು ಮತ್ತು ತಮಾಷೆಗಾಗಿ ಹೀಗೆ ಉಡುಗೆ ತೊಡುಗೆ ಮತ್ತು ಅಲಂಕಾರ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.