ಬೆಂಗಳೂರು: ಗೃಹ ಸಚಿವರ ಆಪ್ತಕಾರ್ಯದರ್ಶಿ ಎಂದು ಹೇಳಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಸ್ನೇಹಿತನೇ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಮಚಂದ್ರ ಹಣ ಕಳೆದುಕೊಂಡಿರುವ ಉದ್ಯಮಿ. ರಾಮಚಂದ್ರ ಅವರ ಸ್ನೇಹಿತನೇ ಆಗಿದ್ದ ಶ್ರೀನಿವಾಸ್ ಎಂಬಾತ ಎಸ್ ಡಿಎ ಕೆಲಸ ಕೊಡಿಸುತ್ತೇನೆ ಮೂರು ವರ್ಷದ ಬಳಿಕ ಪರ್ಮನೆಂಟ್ ಆಗುತ್ತೆ ಎಂದು ಹೇಳಿ ನಂಬಿಸಿ 10 ಲಕ್ಷ ಹಣ ಪಡೆದಿದ್ದನಂತೆ. 2021ರಿಂದ ಹಂತ ಹಂತವಾಗಿ ರಾಮಚಂದ್ರ 10 ಲಕ್ಷ ಹಣ ನೀಡಿದ್ದರಂತೆ.
ಆರ್ಡರ್ ಕಾಪಿ ಈಗ ಬರುತ್ತೆ ಆಗ ಬರುತ್ತೆ ಎಂದು ಕಾಯುತ್ತಲೇ ಇದ್ದರಂತೆ ಆದರೆ ಆರ್ಡರ್ ಕಾಪಿಯೂ ಇಲ್ಲ, ಎಸ್ ಡಿಎ ಕೆಲಸವೂ ಇಲ್ಲ ಎಂಬುದು ಗೊತ್ತಾದಾಗ ಸ್ನೇಹಿತನಿಂದಲೇ ಮೋಸ ಹೋಗಿದ್ದು ಅರಿವಾಗಿದೆ.
ಹಣ ವಾಪಾಸ್ ಕೊಡುವಂತೆ ಕೇಳಿದಾಗ 5 ಲಕ್ಷ ಮಾತ್ರ ಶ್ರೀನಿವಾಸ್ ವಾಪಾಸ್ ಕೊಟ್ಟಿದ್ದಾನೆ. ಉಳಿದ 5 ಲಕ್ಷ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದು, ಉದ್ಯಮಿ ರಾಮಚಂದ್ರ ಕೋಡಿಗೆಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.