
ಬೆಂಗಳೂರು: ಕುಡಿದ ಮತ್ತಿನಲ್ಲಿ ಗೆಳೆಯರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ನೇಹಿತನನ್ನು ಕೊಲೆ ಮಾಡಿ ನಾಟಕ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಸ್ನೇಹಿತ ರಾಜಕುಮಾರ್ ಗೆ ಚಾಕುವಿನಿಂದ ಇರಿದು ಮಾದೇಶ ಎಂಬಾತ ಕೊಲೆ ಮಾಡಿದ್ದ. ನಂತರ ತಾನೇ ಸ್ನೇಹಿತನನ್ನು ಆಸ್ಪತ್ರೆಗೆ ದಾಖಲಿಸಿದ್ದ ಮಾದೇಶ ಯಾರೋ ಅಪರಿಚಿತರು ಕೃತ್ಯವೆಸಗಿದ್ದಾರೆ ಎಂದು ಹೇಳಿ ನಾಟಕವಾಡಿದ್ದ.
ಸ್ನೇಹಿತನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮಾದೇಶ ಪರಾರಿಯಾಗಿದ್ದು, ಪೊಲೀಸ್ ತನಿಖೆ ವೇಳೆ ಆತನ ಕೃತ್ಯ ಬಯಲಾಗಿದೆ. ಕ್ಯಾಬ್ ಚಾಲಕರಾಗಿದ್ದ ರಾಜಕುಮಾರ್ ಮತ್ತು ಮಾದೇಶ ಸ್ನೇಹಿತರಾಗಿದ್ದರು. ನವೆಂಬರ್ 5ರಂದು ಇಬ್ಬರು ಸೇರಿ ನಿರ್ಜನ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಸ್ನೇಹಿತ ಮಾದೇಶ ಕುಟುಂಬದ ಬಗ್ಗೆ ರಾಜಕುಮಾರ್ ನಿಂದಿಸಿದ್ದಾನೆ. ಇಬ್ಬರ ನಡುವೆ ಜಗಳವಾಗಿ ರಾಜಕುಮಾರ್ ಗೆ ಮಾದೇಶ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಲೆಮರೆಸಿಕೊಂಡಿದ್ದ ಆರೋಪಿ ಮಾದೇಶನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.