ಬೆಂಗಳೂರು: ಲಿವ್ ಇನ್ ರಿಲೇಶನ್ ಶಿಪ್ ಸಮಸ್ಯೆ ಇತ್ಯರ್ಥಪಡಿಸುವ ನೆಪದಲ್ಲಿ ಸ್ನೇಹಿತನೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.
ಲಿವ್ ಇನ್ ರಿಲೇಷನ್ ಶಿಪ್ ನಿಂದ ಯುವತಿ ಪ್ರತ್ಯೇಕವಾದ ನಂತರ ಎದುರಾದ ಸಮಸ್ಯೆ ಬಗೆಹರಿಸಿಕೊಳ್ಳಲು ಕರೆಸಿಕೊಂಡಿದ್ದ ಸ್ನೇಹಿತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾಳೆ.
ಸದ್ದುಗುಂಟೆಪಾಳ್ಯದ 22 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ವಸಂತನಗರ ನಿವಾಸಿ ದಿಗ್ವಿಜಯ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2022ರ ಸೆಪ್ಟೆಂಬರ್ ನಿಂದ ದಿಗ್ವಿಜಯ ಸಿಂಗ್ ಜೊತೆಗೆ ಯುವತಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು, ನಂತರ ಇಬ್ಬರ ನಡುವೆ ಮನಸ್ತಾಪ ಬಂದು ದೂರವಾಗಿದ್ದರು.
ಜನವರಿ 19ರಂದು ದಿಗ್ವಿಜಯ ಸಿಂಗ್ ಯುವತಿಗೆ ಕರೆ ಮಾಡಿ ಮನಸ್ತಾಪ ಬಗೆಹರಿಸಿಕೊಳ್ಳಲು ವಸಂತನಗರದ ಮನೆಗೆ ಕರೆಸಿಕೊಂಡಿದ್ದಾನೆ. ಮಾತನಾಡುತ್ತಿದ್ದ ವೇಳೆ ಯುವತಿ ಮೇಲೆ ಹಲ್ಲೆ ನಡೆಸಿ ಕಚ್ಚಿ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಲಾಗಿದೆ.