ಫ್ರೆಂಚ್ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಬೆಂಕಿ ಹಚ್ಚಿಕೊಂಡು ಓಡುವ ಮೂಲಕ ಎರಡು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 39ರ ಹರೆಯದ ಜೊನಾಥನ್ ವೆರೊ ಅವರು ಕೇವಲ 17 ಸೆಕೆಂಡ್ ನಲ್ಲಿ 100 ಮೀಟರ್ ಓಡಿದ ದಾಖಲೆ ಒಂದಾದರೆ, ಆಮ್ಲಜನಕವಿಲ್ಲದೇ 272. 25 ಮೀಟರ್ ದೂರ ಓಡಿದ ದಾಖಲೆಯನ್ನೂ ನಿರ್ಮಿಸಿದ್ದಾರೆ.
ಈ ಮೂಲಕ ಈ ಹಿಂದಿನ ಆಂಟೋನಿ ಬ್ರಿಟನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಈ ಎರಡೂ ದಾಖಲೆ ಆಂಟೋನಿ ಬ್ರಿಟನ್ (ಯುಕೆ) ಹೆಸರಿನಲ್ಲಿದ್ದವು. ರಕ್ಷಣಾತ್ಮಕ ಸೂಟ್ ಧರಿಸಿದ್ದ ಅವರು ಮೈ ತುಂಬಾ ಬೆಂಕಿ ಹಚ್ಚಿಕೊಂಡು ಓಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಅಗ್ನಿಶಾಮಕ ದಳದವರು ವಿಶ್ವ ದಾಖಲೆಯನ್ನು ಸಾಧಿಸಲು ಅಪಾಯಕಾರಿ ಪ್ರಯತ್ನವನ್ನು ಕೈಗೊಂಡಿರುವ ಈ ವೀಡಿಯೊವನ್ನು ಗಿನ್ನೆಸ್ ವಿಶ್ವ ದಾಖಲೆಗಳ ಅಧಿಕೃತ ಇನ್ ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
“ಈ ಪ್ರದರ್ಶನದಿಂದ ನನಗೆ ಬಹಳ ಸಂತೋಷವಾಗಿದೆ. ಅಗ್ನಿಶಾಮಕ ದಳದ ನನ್ನ ಕೆಲಸಕ್ಕೆ ಮತ್ತು ನನಗೆ ತರಬೇತಿ ನೀಡಿದ ಮತ್ತು ನನ್ನ ಬೆಳವಣಿಗೆಯನ್ನು ನೋಡಿದ ಜನರಿಗೂ ಇದು ಸಂತಸ ತಂದಿದೆ” ಎಂದು ಜೋನಾಥನ್ ಹೇಳಿದರು.
ಈ ಸಾಧನೆ ಮಾಡುವುದು ಬಾಲ್ಯದ ಕನಸಾಗಿತ್ತು. ನಾನು ಇನ್ನೂ ಹೆಚ್ಚಿನದನ್ನು ಸಾಧಿಸಿ ದಾಖಲೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.