ನವದೆಹಲಿ: ಉಚಿತ ಜನಪರ ಯೋಜನೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಶ್ರೀಲಂಕಾ ರೀತಿ ದೇಶದ ರಾಜ್ಯಗಳು ಆರ್ಥಿಕ ದುಸ್ಥಿತಿಗೆ ಈಡಾಗಬಹುದು ಎಂದು ಪ್ರಧಾನಿ ಮೋದಿ ಅವರಿಗೆ ಕೇಂದ್ರದ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪ್ರಧಾನಿ ಮೋದಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಉಚಿತ ಸ್ಕೀಂಗಳನ್ನು ನಿಲ್ಲಿಸುವಂತೆ ಅಧಿಕಾರಿಗಳು ಹೇಳಿದ್ದು, ಇದೇ ರೀತಿ ಉಚಿತವಾಗಿ ಯೋಜನೆಗಳನ್ನು ಜಾರಿ ಮಾಡುತ್ತಾ ಹೋದರೆ ಶ್ರೀಲಂಕಾ ರೀತಿ ಆರ್ಥಿಕ ದುಸ್ಥಿತಿ ಎದುರಾಗಲಿದೆ ಎಂದು ಉಚಿತ ಯೋಜನೆಗಳ ಬಗ್ಗೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚುನಾವಣೆ ನಡೆಯುವ ರಾಜ್ಯಗಳಲ್ಲಿ ಸರ್ಕಾರಗಳು ಕಾರ್ಯಸಾಧುವಲ್ಲದ ಯೋಜನೆಗಳನ್ನು ಘೋಷಿಸಿದ್ದು, ರಾಜ್ಯದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿ ಮುಂದುವರೆದರೆ ಶ್ರೀಲಂಕಾದಲ್ಲಿ ಆದ ಸ್ಥಿತಿ ಇಲ್ಲಿಯೂ ಆಗಬಹುದು ಎಂದು ಅಧಿಕಾರಿಗಳು ಪ್ರಧಾನಿಯವರಿಗೆ ಸಲಹೆ ನೀಡಿದ್ದಾರೆ.