
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು ಅದೇಶ ಹೊರಡಿಸಲಾಗಿದೆ.
ಯೋಜನೆಯ ಅನುಷ್ಠಾನ ಈಗಾಗಲೇ ಪ್ರಾರಂಭವಾಗಿದ್ದು, ಸದರಿ ಯೋಜನೆಯನ್ನು ಇನ್ನೂ ನಿಖರವಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ(EDCS) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶವನ್ನು ಬಳಸಿಕೊಂಡು ಮುಖ್ಯೋಪಾಧ್ಯಾಯರುಗಳು ತಮ್ಮ ಶಾಲೆಯ ವಿದ್ಯುತ್ ಸಂಪರ್ಕದ ವಿವರವನ್ನು ಆನ್-ಲೈನ್ನಲ್ಲಿ ದಾಖಲಿಸಬೇಕಾಗಿದೆ.
ಈ ಮೊದಲು ಆನ್-ಲೈನ್ ಪೋರ್ಟ್ಲ್ ನಲ್ಲಿ 01 ಯು-ಡೈಸ್ ಸಂಖ್ಯೆಗೆ 01 ವಿದ್ಯುತ್ ಸ್ಥಾವರದ ಅಕೌಂಟ್ ಐಡಿಯನ್ನು ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಒಂದೇ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚಿನ ವಿದ್ಯುತ್ ಸ್ಥಾವರಗಳಿರುವುದರಿಂದ ಹಾಗೂ ಒಂದೇ ಅವರಣದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯಿರುವ ಶಾಲೆಗಳು ಒಂದೇ ಯು-ಡೈಸ್ ಹೊಂದಿರುವುದರಿಂದ ಆನ್-ಲೈನ್ ಪೋರ್ಟಲ್ನಲ್ಲಿ ನೊಂದಣಿ ಮಾಡಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಪ್ರಸ್ತುತ 01 ಯು-ಡೈಸ್ ಸಂಖ್ಯೆಗೆ ಗರಿಷ್ಠ 03 ವಿದ್ಯುತ್ ಸ್ಥಾವರಗಳ ಅಕೌಂಟ್ ಐಡಿಗಳನ್ನು ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಪಟ್ಟ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರುಗಳು ಆನ್-ಲೈನ್ ಪೋರ್ಟಲ್ನಲ್ಲಿ ತಿಳಿಸಿರುವ ಅಂಶಗಳಂತೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

