ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಜುಲೈ 1 ರಿಂದ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜುಲೈ 1 ರಿಂದ 10 ಕೆಜಿ ಅಕ್ಕಿ ಸಿಗುವುದು ಅನುಮಾನ ಎನ್ನಲಾಗಿದೆ.
ಈ ಕುರಿತಂತೆ ಶಕ್ತಿ ಭವನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಜೊತೆ ನಾನೇ ಮಾತನಾಡಿದ್ದೇನೆ, ಅವರು ತಮ್ಮ ಬಳಿಯಲ್ಲಿ ಅಕ್ಕಿ ಸಿಗಲ್ಲ ಎಂದಿದ್ದಾರೆ. ಆಂಧ್ರ ಸರ್ಕಾರದ ಜೊತೆ ಚರ್ಚಿಸುವಂತೆ ಸಿಎಸ್ ಗೆ ಹೇಳಿದ್ದೇನೆ ಎಂದರು. ಛತ್ತೀಸ್ ಗಢ ಸರ್ಕಾರ 1.5 ಲಕ್ಷ ಟನ್ ಅಕ್ಕಿ ಕೊಡಲು ಸಮ್ಮತಿಸಿದೆ. ಆದರೇ ದರ ಸ್ವಲ್ಪ ದುಬಾರಿ ಇದೆ. ಅಲ್ಲದೇ ಸಾಗಾಣೆ ವೆಚ್ಚವೂ ಹೆಚ್ಚಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು . ಇವೆಲ್ಲವನ್ನೂ ನೋಡುತ್ತಿದ್ದರೆ ಜುಲೈ 1 ರಿಂದ 10 ಕೆಜಿ ಅಕ್ಕಿ ಸಿಗುವುದು ಅನುಮಾನವಿದೆ ಎನ್ನಲಾಗಿದೆ.
ಅಕ್ಕಿ ಕೊಡದೇ ಬಡವರಿಗೆ ಅನ್ಯಾಯ ಮಾಡಬೇಡಿ : ಡಿಕೆ ಸುರೇಶ್ ಆಕ್ರೋಶ
ಬಿಜೆಪಿ, ಜೆಡಿಎಸ್ ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತೆ, ಬಡವರಿಗೆ ಅನ್ಯಾಯ ಮಾಡಬೇಡಿ ಎಂದು ಸಂಸದ ಡಿಕೆ ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಸುರೇಶ್ ನಾವು ಫ್ರೀ ಆಗಿ ಅಕ್ಕಿ ಕೊಡಿ ಎಂದು ನಾವು ಕೇಳುತ್ತಿಲ್ಲ, ಕೇಂದ್ರದ ದರ ಎಷ್ಟಿದೆ ಆ ಪ್ರಕಾರ ಕೊಡಿ. ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಬಡವರಿಗೆ ಅನ್ಯಾಯ ಮಾಡಬೇಡಿ ಎಂದರು.
ಕಾಂಗ್ರೆಸ್ ಗೆ ಓಟು ಹಾಕಿದವರಿಗೂ ಅಕ್ಕಿ ಸಿಗುತ್ತೆ. ಬಿಜೆಪಿ- ಜೆಡಿಎಸ್ ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತೆ. ಬಡವರಿಗೆ ನೀಡುವ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಡಿಕೆ ಸುರೇಶ್ ಆಕ್ರೋಶ ಹೊರ ಹಾಕಿದರು.