ಭೋಪಾಲ್: ಡಿಸೆಂಬರ್ ವೇಳೆಗೆ ಭಾರತದಲ್ಲಿ ವಯಸ್ಕರೆಲ್ಲರಿಗೂ ಲಸಿಕೆ ಹಾಕಲು ಸರ್ಕಾರ ಉದ್ದೇಶಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಕೋವಿಡ್-19 ಲಸಿಕೆ ಪಡೆಯಲು ಹಿಂಜರಿಕೆ, ವದಂತಿ ಮೊದಲಾದ ಕಾರಣಗಳಿಂದ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದೆ. ಲಸಿಕೆಯನ್ನು ಹೆಚ್ಚು ಜನರಿಗೆ ನೀಡಲು ಮತ್ತು ಅಭಿಯಾನ ಚುರುಕುಗೊಳಿಸಲು ಬಿಜೆಪಿ ಶಾಸಕರೊಬ್ಬರು ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ನ ಬೆರಾಸಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಷ್ಣು ಖತ್ರಿ ಅವರು, ಕೋವಿಡ್-19 ವಿರುದ್ಧದ ವ್ಯಾಕ್ಸಿನೇಷನ್ ಉತ್ತೇಜಿಸಲು ಉಚಿತವಾಗಿ ಮೊಬೈಲ್ ರೀಚಾರ್ಜ್ ಮಾಡಿಸಲಾಗುವುದು ಎಂದು ಘೋಷಿಸಿದ್ದಾರೆ.
ಜೂನ್ 30 ರೊಳಗೆ ಲಸಿಕೆ ಪಡೆದುಕೊಳ್ಳುವ ತಮ್ಮ ಕ್ಷೇತ್ರದ ಎಲ್ಲಾ ಜನರಿಗೆ ಉಚಿತವಾಗಿ ಮೊಬೈಲ್ ರಿಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಕ್ಷೇತ್ರದ ಯಾವುದೇ ಪಂಚಾಯಿತಿಯಲ್ಲಿ ಮೊದಲು ಶೇಕಡ 100 ರಷ್ಟು ಲಸಿಕೆ ಹಾಕಿದ ಪಂಚಾಯಿತಿಗಳಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ತಮ್ಮ ಕ್ಷೇತ್ರದ ಜನರಿಗೆ ಅನುಕೂಲವಾಗುವಂತೆ ಆಫರ್ ನೀಡಲಾಗಿದೆ. ಜೂನ್ 30 ರೊಳಗೆ ಲಸಿಕೆ ಹಾಕಿಸಿಕೊಂಡವರಿಗೆ ಮೊಬೈಲ್ ಗೆ ಉಚಿತ ರಿಚಾರ್ಜ್ ಮಾಡಿಸುವುದಾಗಿ ಘೋಷಿಸಿದ್ದಾರೆ.