ಬಳ್ಳಾರಿ: ಬಳ್ಳಾರಿ ಜೆಸ್ಕಾಂನ ಗ್ರಾಮೀಣ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯುತ್ ಗ್ರಾಹಕರ ಗೃಹ ಬಳಕೆ(ಎಲ್.ಟಿ-1 ಮತ್ತು ಎಲ್.ಟಿ-2) ಸ್ಥಾವರಗಳಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಲು ಸರ್ಕಾರವು ಆದೇಶ ಹೊರಡಿಸಿದೆ.
ಈ ಸೌಲಭ್ಯ ಪಡೆಯಲಿಚ್ಛಿಸುವ ವಿದ್ಯುತ್ ಗ್ರಾಹಕರು ನಿಬಂಧನೆಗಳನ್ನು ಪೂರೈಸುವುದರೊಂದಿಗೆ ಅವಶ್ಯ ದಾಖಲಾತಿಗಳನ್ನು ನೀಡಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ನಿಬಂಧನೆಗಳು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್/ಎಸ್‍ಟಿ) ಸರ್ಟಿಫಿಕೇಟ್ ಹೊಂದಿರಬೇಕು. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು. ಈ ಸೌಲಭ್ಯವನ್ನು ಪಡೆಯುವ ಹಿಂದಿನ ತಿಂಗಳ ಅಂತ್ಯಕ್ಕೆ ಇರುವ ವಿದ್ಯುತ್ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸಿರಬೇಕು.
ಸಲ್ಲಿಸಬೇಕಾದ ದಾಖಲಾತಿಗಳು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್/ಎಸ್‍ಟಿ) ಆರ್.ಡಿ ನಂಬರ್ ಸರ್ಟಿಫಿಕೇಟ್, ಬಿ.ಪಿ.ಎಲ್ ರೇಷನ್‍ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಫೋಟೋ ಹಾಗೂ ವಿದ್ಯುತ್ ಬಿಲ್ ಪಾವತಿಸಿದ ದಾಖಲಾತಿಗಳು.
ಈ ಸೌಲಭ್ಯವನ್ನು ಪಡೆಯಲಿಚ್ಛಿಸುವ ಗ್ರಾಹಕರು ತಮ್ಮ ಹೆಸರಿನಲ್ಲಿ ಮೀಟರ್ ಇರತಕ್ಕದ್ದು ಹಾಗೂ ಈ ಸೌಲಭ್ಯಕ್ಕೆ ಅರ್ಹರಾಗುವ ಈ ಪ್ರವರ್ಗದ ವಿದ್ಯುತ್ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್‍ನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ ಸದರಿ ಗ್ರಾಹಕರುಗಳಿಗೆ ಡಿಬಿಟಿ ಯೋಜನೆ ವ್ಯವಸ್ಥೆಯಡಿ ಸರ್ಕಾರದಿಂದ ಸಹಾಯಧನವನ್ನು ನೀಡುವ ಮುಖಾಂತರ ಮರು ಪಾವತಿಸಲಾಗುವುದು ಎಂದು ಹೇಳಲಾಗಿದೆ.