ಶ್ರೀನಗರ: ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು ಇಂದು ಎರಡನೇ ದಿನದ ಭೇಟಿ ವೇಳೆ ಶ್ರೀನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಜಮ್ಮುವಿಗೆ ಅನ್ಯಾಯದ ಸಮಯ ಮುಗಿದಿದೆ. ನಿಮಗೆ ಯಾರೂ ಅನ್ಯಾಯ ಮಾಡಲು ಸಾಧ್ಯವಿಲ್ಲ. ಇಲ್ಲಿ ಆರಂಭವಾಗುತ್ತಿರುವ ಅಭಿವೃದ್ಧಿಯ ಯುಗ ಮುಂದುವರೆಯಲಿದೆ. ಅಭಿವೃದ್ಧಿಯನ್ನು ಯಾರೂ ಅಡ್ಡಿಪಡಿಸಲು ಸಾಧ್ಯವಾಗುವುದಿಲ್ಲ ಎಂದರು.
ಜಮ್ಮು-ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಕೇವಲ ನಾಲ್ಕು ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು ಇಲ್ಲಿ 7 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ, ಮೊದಲು 500 ವಿದ್ಯಾರ್ಥಿಗಳು ಇಲ್ಲಿಂದ ಎಂಬಿಬಿಎಸ್ ಮಾಡಬಹುದಾಗಿತ್ತು, ಈಗ ಸುಮಾರು 2,000 ವಿದ್ಯಾರ್ಥಿಗಳು ಇಲ್ಲಿ ಎಂಬಿಬಿಎಸ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಜಮ್ಮುವಿನಲ್ಲಿ ಭೂಮಿ ಖರೀದಿಸುವ ಹಕ್ಕು ಇರಲಿಲ್ಲ. ಇಲ್ಲಿಗೆ ಬಂದ ನಿರಾಶ್ರಿತರಿಗೆ ಹಕ್ಕುಗಳಿರಲಿಲ್ಲ, ಭಾರತದ ಸಂವಿಧಾನದ ಎಲ್ಲಾ ಹಕ್ಕು, ಅಧಿಕಾರಗಳು ದೇಶದ ಸಹೋದರರಿಗೆ ಸಿಕ್ಕಿವೆ. ಆಗಸ್ಟ್ 5, 2019 ರಂದು ಪ್ರಧಾನಿ ಮೋದಿ ಅವರು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡು 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿದರು. ಇದು ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ಜನರಿಗೆ ಹಕ್ಕುಗಳನ್ನು ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜನರಿಗೆ ಉಚಿತ ವಿದ್ಯುತ್ ಸಂಪರ್ಕಗಳನ್ನು ನೀಡಲಾಗುವುದು ಎಂದು ಅಮಿತ್ ಶಾ ಘೋಷಣೆ ಮಾಡಿದ್ದಾರೆ.