ನವದೆಹಲಿ: ಎಲ್ಲರಿಗೂ ಉಚಿತ ಲಸಿಕೆ ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯಗಳಿಗೆ ಲಸಿಕೆಯನ್ನು ಸಮಾನವಾಗಿ ಏಕೆ ಹಂಚಿಲ್ಲ ಎಂದು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ಶೇಕಡ 100 ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ನೀಡಬೇಕೆಂದು ತಿಳಿಸಿದೆ.
ಬಡವರು ಹಣಕೊಟ್ಟು ಲಸಿಕೆ ಪಡೆಯಲು ಕಷ್ಟವಾಗಬಹುದು. ಆದರೆ, ಕೇಂದ್ರ ಸರ್ಕಾರವೇ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಮಾದರಿಯಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಸಿಕೆಗೆ ಪ್ರತ್ಯೇಕ ದರ ನಿಗದಿ ಮಾಡಿರುವುದನ್ನು ಪ್ರಶ್ನಿಸಿದೆ.
ಲಸಿಕೆ ತಯಾರಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ನೀಡಿದ ಹಣವೆಷ್ಟು ಎಂಬುದನ್ನು ತಿಳಿಸಲು ಸೂಚಿಸಿದೆ. ಲಸಿಕೆ ತಯಾರಿಕರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ.