ಎಲ್ಲ ಹೆಂಗಸರು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಘೋಷಿಸಿದ್ದಾರೆ.
“ಈ ಗ್ಯಾರಂಟಿಯನ್ನು ಈಡೇರಿಸಲು ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ ಬೀಳಲಿದೆ ಎಂಬುದನ್ನು ಮುಖ್ಯಮಂತ್ರಿಗಳಿಗೆ ಶೀಘ್ರ ಸಲ್ಲಿಸಲಾಗುವುದು. ಈ ಸೌಕರ್ಯವು ಬಿಪಿಎಲ್ ಕಾರ್ಡ್‌ದಾರರಿಗೆ ಮಾತ್ರವೋ ಅಥವಾ ಎಪಿಎಲ್ ಕಾರ್ಡ್‌ದಾರರಿಗೂ ಇದೆಯೋ ಎಂಬುದನ್ನು ನಾವು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರಲಿಲ್ಲ, ಹೀಗಾಗಿ ಎಲ್ಲ ಮಹಿಳೆಯರಿಗೂ ಪ್ರಯಾಣ ಉಚಿತ,” ಎಂದು ರೆಡ್ಡಿ ತಿಳಿಸಿದ್ದಾರೆ. ಈ ಸಂಬಂಧ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ರಾಜ್ಯ ರಸ್ತೆ ಸಾರಿಗೆ ಇಲಾಖೆಗಳ ಎಂಡಿಗಳೊಂದಿಗೆ ರೆಡ್ಡಿ ಮಾತನಾಡಿದ್ದಾರೆ.
ಕರ್ನಾಟಕಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವು ಶುಕ್ರವಾರ ಅಥವಾ ಶನಿವಾರದಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಸಂಬಂಧ ಬುಧವಾರ ಸಂಪುಟದ ಸಭೆ ಸೇರಲಿದ್ದು, ಎಲ್ಲಾ ಐದು ಚುನಾವಣಾ ಗ್ಯಾರಂಟಿಗಳ ಕುರಿತು ಮುಖ್ಯಮಂತ್ರಿಗಳಿಗೆ ಮಂತ್ರಿಗಳು ವಿವರ ಸಲ್ಲಿಸಲಿದ್ದಾರೆ.
ಈ ಯೋಜನೆಯ ಫಲಾನುಭವಿಗಳಾಗಲು ಏನಾದರೂ ಷರತ್ತುಗಳಿವೆಯೇ ಎಂಬ ಪ್ರಶ್ನೆಗೆ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
“ಈ ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತರಲು ಮೂರು – ನಾಲ್ಕು ಆಯ್ಕೆಗಳಿವೆ. ನಾನು ಈಗ ಅವುಗಳ ಬಗ್ಗೆ ಮಾತನಾಡಲಾರೆ. ನಮಗೆ ಈ ಸಂಬಂಧ ಯಾವುದೇ ಮಾರ್ಗಸೂಚಿಗಳಿಲ್ಲ. ಈ ಕುರಿತು ಸಂಪುಟವು ನಿರ್ಣಯ ತೆಗೆದುಕೊಳ್ಳಲಿದೆ,” ಎಂದಿದ್ದಾರೆ ರೆಡ್ಡಿ.
ಇದೇ ವೇಳೆ, ಯಾವೆಲ್ಲಾ ಬಗೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ ಎಂಬ ಕುರಿತು ಸಚಿವರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಒಟ್ಟಾರೆ ಪ್ರತಿನಿತ್ಯ 82.51 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ ಎಂದು ನ್ಯೂಸ್9ರ ವರದಿಯೊಂದು ತಿಳಿಸಿದೆ. ಇದರಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ.
2022-23ರಲ್ಲಿ ಈ ನಾಲ್ಕೂ ಆರ್‌ಟಿಸಿಗಳು ಒಟ್ಟಾರೆ 8,947 ಕೋಟಿ ರೂಗಳ ಆದಾಯ ಕಂಡಿವೆ ಎಂದು ತಿಳಿದು ಬಂದಿದೆ. ಎಲ್ಲಾ ಆರ್‌ಟಿಸಿಗಳ ಬಳಿ 23,978 ಬಸ್ಸುಗಳಿದ್ದು, 21,574 ಬಸುಗಳು ಕಾರ್ಯನಿರ್ವಹಿಸುತ್ತಿವೆ.
ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರ 2019ರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಪರಿಚಯಿಸಿತ್ತು. ದೆಹಲಿ ಸಾರಿಗೆ ನಿಗಮ (ಡಿಟಿಸಿ) ಹಾಗೂ ದೆಹಲಿ ಸಮಗ್ರ ಬಹು-ವಿಧದ ಸಾರಿಗೆ ವ್ಯವಸ್ಥೆ (ಡಿಮ್ಟ್ಸ್) ಪಿಂಕ್ ಟಿಕಟ್‌ಗಳ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು.
ತಮಿಳು ನಾಡಿನಲ್ಲಿ ಡಿಎಂಕೆ ಸರ್ಕಾರವು 2021ರ ಮೇನಿಂದ ಮಹಿಳೆಯರಿಗೆ ಶೂನ್ಯ-ಟಿಕೆಟ್ ಬಸ್ ಪ್ರಯಾಣ ಯೋಜನೆಯನ್ನು ಪರಿಚಯಿಸಿದೆ. ಈ ಸ್ಕೀಂನಡಿ ಮಹಿಳೆಯರಿಗೆ ಶುಲ್ಕ-ರಹಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ.