ಬೆಂಗಳೂರು: ಶಕ್ತಿ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಹಿಳೆಯರಿಗೆ ಸರ್ಕಾರದಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ರಾಜ್ಯದೊಳಗೆ ಪ್ರಯಾಣಕ್ಕೆ ಮಾತ್ರ ಶಕ್ತಿ ಯೋಜನೆ ಅನ್ವಯವಾಗಲಿದೆ. ಐಷಾರಾಮಿ ಬಸ್ ಗಳಾದ ರಾಜಹಂಸ, ನಾನ್ ಎಸಿ, ಸ್ಲೀಪರ್ ಬಸ್, ವಜ್ರ, ವಾಯು ವಜ್ರ, ಐರಾವತ, ಕ್ಲಬ್ ಕ್ಲಾಸ್, ಅಂಬಾರಿ ಬಸ್, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ, ಇವಿ ಪವರ್ ಪ್ಲೇಸ್ ಬಸ್ ಗಳಲ್ಲಿ ಯೋಜನೆ ಅನ್ವಯವಾಗುವುದಿಲ್ಲ.
ಬಿಎಂಟಿಸಿ ಹೊರತುಪಡಿಸಿ ಕೆಎಸ್ಆರ್ಟಿಸಿ ವಾಯುವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಶೇಕಡ 50ರಷ್ಟು ಆಸನಗಳು ಪುರುಷರಿಗೆ ಮೀಸಲಾಗಿರುತ್ತವೆ. ನಾಲ್ಕು ಸಾರಿಗೆ ನಿಗಮಗಳಿಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಲಿದೆ.
ಶೂನ್ಯ ಟಿಕೆಟ್/ ಶಕ್ತಿ ಸ್ಮಾರ್ಟ್ ದತ್ತಾಂಶ ಆಧರಿಸಿ ಸರ್ಕಾರ ವೆಚ್ಚ ಭರಿಸುತ್ತದೆ. ಸೇವಾ ಸಿಂಧು ಮೂಲಕ ಅರ್ಜಿ ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಮುಂದಿನ ಮೂರು ತಿಂಗಳೊಳಗೆ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಪೂರ್ಣಗೊಳ್ಳಲಿದೆ. ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಭಾವಚಿತ್ರ ಹಾಗೂ ವಿಳಾಸವಿರುವ ಐಡಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.