ಬೆಂಗಳೂರು : ರಾಜ್ಯದ ಮಹಿಳೆಯರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಶಕ್ತಿ ಯೋಜನೆ ಸ್ಥಗಿತ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ, ಶಕ್ತಿ ಯೋಜನೆ ಸ್ಥಗಿತವಾಗಿಲ್ಲ…ಮುಂದುವರೆಯುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಷ್ಟನೆ ನೀಡಿದೆ.
ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಸದ್ಯದಲ್ಲೇ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗಲಿದೆ. ಈ ಬಗ್ಗೆ ಕೋರ್ಟ್ ಆದೇಶ ಹೊರಡಿಸಿದೆ ಎಂಬ ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಹರಡಿಸುತ್ತಿದ್ದಾರೆ. ಈ ಹಿನ್ನೆಲೆ ಸ್ಪಷ್ಟನೆ ನೀಡಿದ ಕೆಎಸ್ ಆರ್ ಟಿಸಿ ಶಕ್ತಿ ಯೋಜನೆ ಸ್ಥಗಿತವಿಲ್ಲ…ಮುಂದುವರೆಯುತ್ತದೆ, ಯಾರೂ ಸುಳ್ಳು ಸುದ್ದಿ ನಂಬಬೇಡಿ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸ್ಪಷ್ಟನೆ ನೀಡಿದ್ದು, ಶಕ್ತಿ ಯೋಜನೆ ನಿಂತು ಹೋಗುತ್ತದೆ ಅಂತ ಊಹಾಪೋಹಗಳು ಕೇಳಿ ಬರುತ್ತಿವೆ. ಇದನ್ನು ಒಂದು ಪಕ್ಷದವರು ಮಾಡಿಸುತ್ತಿದ್ದಾರೆ ಎಂದರು. ಐದಲ್ಲ 10 ವರ್ಷ ಯೋಜನೆ ಮುಂದುವರೆಯುತ್ತದೆ. ಮಹಿಳೆಯರು ಯಾರೂ ಕೂಡ ಪಾಸ್ ಪಡೆಯುವ ಅಗತ್ಯವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇನ್ನೂ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದೆ.ರಾಜ್ಯಾದ್ಯಂತ ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವೆಹಿಕಲ್ ಟ್ರಾಕಿಂಗ್ ಸಿಸ್ಟಮ್ ಹಾಗೂ ಬಸ್ಸುಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಶಕ್ತಿ ಯೋಜನೆ ಯಶಸ್ವಿಯಾಗಿ ಮಹಿಳಾ ಸಬಲೀಕರಣಕ್ಕೆ ಮಹತ್ತರ ಕೊಡುಗೆ ನೀಡುತ್ತಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವೆಹಿಕಲ್ ಟ್ರಾಕಿಂಗ್ ಸಿಸ್ಟಮ್ ಹಾಗೂ ಬಸ್ಸುಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲು ಮುಂದಾಗಿದೆ ನಮ್ಮ ಸರ್ಕಾರ. ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಸದೃಢಗೊಳಿಸಿ ದೇಶಕ್ಕೆ ಮಾದರಿಯಾಗಿಸುವ ಪ್ರಯತ್ನ ನಮ್ಮ ಸರ್ಕಾರದ್ದು ಎಂದು ಹೇಳಿದೆ