ಬೆಂಗಳೂರು: ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧ ಮುಂಭಾಗ ನಡೆಯುವ ಕಾರ್ಯಕ್ರಮದಲ್ಲಿ ಆಯ್ದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ.
ರಾಜ್ಯದಾದ್ಯಂತ ಜಿಲ್ಲಾ ಸಚಿವರು ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ರಾಜ್ಯದ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ. ಪ್ರಯಾಣಿಕರಿಗೆ ಶೂನ್ಯ ದರದ ಟಿಕೆಟ್ ನೀಡಲಾಗುತ್ತದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೊದಲಾದವರು ವಿಧಾನಸೌಧ ಮುಂಭಾಗ ನಡೆಯುವ ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಮಹಿಳೆಯರು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕಿದ್ದು, ಇಂದಿನಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಆರಂಭವಾಗಲಿದೆ. ಅದುವರೆಗೂ ಆದರೂ ವೋಟರ್ ಐಡಿ, ಗುರುತಿನ ಪುರಾವೆ ತೋರಿಸಿ ಉಚಿತವಾಗಿ ಪಯಣಿಸಬಹುದು. ಸಾಮಾನ್ಯ ಬಸ್ ಗಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿದೆ.
ರಾಜಹಂಸ, ಎಸಿ, ಅಂಬಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇರುವುದಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಬಸ್ ಗಳಲ್ಲಿ ಸ್ಟಿಕರ್ ಅಂಟಿಸಲಾಗುತ್ತದೆ. ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ ಗಳಲ್ಲಿ ಮಾತ್ರ ಪ್ರಯಾಣಿಸಬಹುದು. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಸಂಚರಿಸಲು ಅವಕಾಶವಿದೆ. ರಾಜ್ಯದೊಳಗಿನ ಪ್ರಯಾಣಕ್ಕೆ ರಾಜ್ಯದಲ್ಲಿ ವಾಸಿಸುವ ಮಹಿಳೆಯರಿಗೆ ಮಾತ್ರ ಇದು ಸೀಮಿತವಾಗಿದೆ.