ಕೆಲವು ರೋಗಗಳು ತುಂಬಾ ಅಪಾಯಕಾರಿ ಮತ್ತು ಮಾರಣಾಂತಿಕವಾಗಿರುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಹಣ ಬೇಕು. ಬಡ ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಗೆ ಹಣವಿಲ್ಲದೇ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಹಾಗಾಗಿ ಅಂತಹ ಕೆಲವೊಂದು ರೋಗಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯುವಂತಿರಬೇಕು.
ಭಾರತದಲ್ಲಿ ಕೂಡ ಕ್ಯಾನ್ಸರ್, ಕಣ್ಣಿನ ಕಾಯಿಲೆ, ಹೃದ್ರೋಗ, ಪಾರ್ಶ್ವವಾಯು, ಹೊಟ್ಟೆಯ ಸಮಸ್ಯೆಗಳು ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಕೆಲವು ಆಸ್ಪತ್ರೆಗಳಿವೆ.
ಸತ್ಯಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸಸ್
ಬೆಂಗಳೂರಿನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದು. ‘ಸತ್ಯ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಮೆಡಿಕಲ್ ಸೈನ್ಸಸ್’ನಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿವೆ. ಪ್ರತಿ ವರ್ಷ ಇಲ್ಲಿ 1500 ಹೃದಯ ಮತ್ತು 1700 ನರಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಹೃದಯ ಶಸ್ತ್ರಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋದರೆ 4-5 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತ. ಈ ಆಸ್ಪತ್ರೆಯ ವಿಶೇಷವೆಂದರೆ ರೋಗಿಗಳ ವಯಸ್ಸು ಮತ್ತು ಆದಾಯವನ್ನು ಲೆಕ್ಕಿಸದೆ ಅವರಿಗೆ ಟ್ರೀಟ್ಮೆಂಟ್ ನೀಡಲಾಗುತ್ತದೆ. ರೋಗಿಯು ಆಸ್ಪತ್ರೆಯಲ್ಲಿ ಇರುವವರೆಗೂ ಅವರಿಗೆ ನೀಡುವ ಆರೋಗ್ಯ ಸಲಹೆ, ಔಷಧಿ ಮತ್ತು ಆಹಾರಕ್ಕಾಗಿ ಹಣವನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ.
‘ಟಾಟಾ ಮೆಮೋರಿಯಲ್ ಹಾಸ್ಪಿಟಲ್‘ ಇಂಡಿಯಾ
ಸದ್ಯ ಕ್ಯಾನ್ಸರ್ ಚಿಕಿತ್ಸೆಗೆ 10-15 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ ಭಾರತದ ಕೆಲವು ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಉಚಿತ. ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇಲ್ಲಿ ಶೇ 70ರಷ್ಟು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ
ಕ್ಯಾನ್ಸರ್ ರೋಗಿಗಳಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಭಾರತ ಸರ್ಕಾರವು ಈ ಆಸ್ಪತ್ರೆಗೆ ಹಣವನ್ನು ನೀಡುತ್ತದೆ. ಜತೆಗೆ ಇಲ್ಲಿ ಔಷಧಿಗಳೂ ಅಗ್ಗದ ದರದಲ್ಲಿ ದೊರೆಯುತ್ತವೆ.
ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ತಿರುವನಂತಪುರಂ
ಈ ಆಸ್ಪತ್ರೆಯಲ್ಲಿ ಶೇ.60 ರಷ್ಟು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಐಸೊಟೋಪ್, ಸಿಟಿ ಸ್ಕ್ಯಾನಿಂಗ್ ಜೊತೆಗೆ ಕಿಮೊಥೆರಪಿಯನ್ನು ಉಚಿತವಾಗಿ ಮಾಡಲಾಗುತ್ತದೆ. ಮಧ್ಯಮ ವರ್ಗದ ಆದಾಯ ಗುಂಪಿನ 29 ಪ್ರತಿಶತ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ನೀಡಲಾಗುತ್ತದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳೂ ಸುಲಭವಾಗಿ ಚಿಕಿತ್ಸೆ ಪಡೆಯಬಹುದು.
ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಕೋಲ್ಕತ್ತಾ
ಈ ಆಸ್ಪತ್ರೆಯಲ್ಲಿ ಅಗ್ಗದ ಕ್ಯಾನ್ಸರ್ ಚಿಕಿತ್ಸೆ ದೊರೆಯುತ್ತದೆ. ಜೊತೆಗೆ ಕ್ಯಾನ್ಸರ್ ಔಷಧಿಗಳೂ ಅಗ್ಗದ ದರದಲ್ಲಿ ಇಲ್ಲಿ ಲಭ್ಯ.
ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ
ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರವು ವಿಶ್ವಾಸಾರ್ಹ ಆಂಕೊಲಾಜಿ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇಲ್ಲಿ ಆಂಕೊಲಾಜಿಸ್ಟ್‌ಗಳು, ದಾದಿಯರು ಮತ್ತು ಉನ್ನತ ದರ್ಜೆಯ ತಂತ್ರಜ್ಞಾನವಿದೆ. ಕೈಗೆಟಕುವ ದರದಲ್ಲಿ ಔಷಧಗಳನ್ನು ನೀಡಲಾಗುತ್ತದೆ.
ದೇಶದಲ್ಲಿ ಅರ್ಧದಷ್ಟು ಜನರು ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಣ್ಣಿನ ಕ್ಯಾನ್ಸರ್, ಗ್ಲುಕೋಮಾ, ಕಣ್ಣಿನ ಪೊರೆ, ರೆಟಿನೋಬ್ಲಾಸ್ಟೊಮಾ, ರೆಟಿನೋಪತಿಯಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಕೂಡ ಉಚಿತ ಚಿಕಿತ್ಸೆ ಲಭ್ಯವಿದೆ. ಅತ್ಯುತ್ತಮ ಕಣ್ಣಿನ ಆರೈಕೆ ಕೇಂದ್ರಗಳು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಹರಡಿವೆ. ಅಲ್ಲಿ ಕಣ್ಣಿನ ಚಿಕಿತ್ಸೆಯು ಉಚಿತ ಅಥವಾ ಅಗ್ಗವಾಗಿದೆ.
ಶಂಕರ್ ಕಣ್ಣಿನ ಆಸ್ಪತ್ರೆ
ಮಕ್ಕಳ ಕಣ್ಣಿನ ಪೊರೆ, ರೆಟಿನಾ ಸರ್ಜರಿ, ರೆಟಿನೋಬ್ಲಾಸ್ಟೊಮಾ, ಕಣ್ಣಿನ ಕ್ಯಾನ್ಸರ್‌ಗೆ ಈ ಆಸ್ಪತ್ರೆಗಳು ಇದುವರೆಗೆ 25 ಲಕ್ಷ ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡಿವೆ. ಈ ಆಸ್ಪತ್ರೆಯ ಒಟ್ಟು 13 ಶಾಖೆಗಳಿವೆ. ನ್ಯೂ ಬಾಂಬೆ, ತಮಿಳುನಾಡಿನಲ್ಲಿ, ಗುಂಟೂರು, ಹೈದರಾಬಾದ್, ಕಾನ್ಪುರ, ಇಂದೋರ್, ಜೈಪುರ, ಲೂಧಿಯಾನ, ಕರ್ನಾಟಕದಲ್ಲಿ ಚಿಕಿತ್ಸೆ ಲಭ್ಯವಿದೆ. 14ನೇ ಶಾಖೆಯನ್ನು ವಾರಣಾಸಿಯಲ್ಲಿ ನಿರ್ಮಿಸಲಾಗುತ್ತಿದೆ.