ನಾಗ್ಪುರ: ನಾಸಾ ವಿಜ್ಞಾನಿ ಎಂದು ಹೆಳಿಕೊಂಡು, ಮಹಾರಾಷ್ಟ್ರದ ನಾಗ್ಪುರ ಪ್ರಾದೇಶಿಕ ದೂರ ಸಂವೇದಿ ಕೇಂದ್ರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 111 ಉದ್ಯೋಗಾಕಾಂಕ್ಷಿಗಳಿಗೆ ಕೊಲೆ ಆರೋಪಿಯೊಬ್ಬ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಓಂಕಾರ್ ಮಹೇಂದ್ರ ಎಂಬ ಆರೋಪಿ ತನ್ನನ್ನು ನಾಸಾ ವಿಜ್ಞಾನಿ ಎಂದು ಪರಿಚಯಿಸಿಕೊಂಡಿದ್ದ. ನಾಗ್ಪುರದ ಆರ್.ಆರ್.ಎಸ್.ಸಿಯಲ್ಲಿ ಹೆಚ್ಚಿನ ಸಂಬಳಕ್ಕೆ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ, 111 ಜನರಿಂದ ಹಣ ವಸೂಲಿ ಮಾಡಿ ವಂಚಿಸಿದ್ದಾನೆ.
ಓಂಕಾರ್ ಮಹೇಂದ್ರನಿಂದ ವಂಚನೆಗೊಳಗಾದ ಅಶ್ವಿನ್ ಅರವಿಂದ್ ವಾಂಖಡೆ, ಆರೋಪಿ ಉದ್ಯೋಗದ ಆಸೆ ಹುಟ್ಟಿಸಿ 2 ಲಕ್ಷ ರೂಪಾಯಿ ಪಡೆದಿದ್ದಾನೆ. ಕೆಲಸ ಕೊಡುವುದಾಗಿ ಹೇಳಿ ಹಲವರಿಂದ ಹೀಗೆಯೇ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರು ನೀಡಿದ್ದಾರೆ. ಇದೇ ರೀತಿ 111 ಉದ್ಯೋಗಾಕಾಂಕ್ಷಿಗಳಿಗೆ ಆರೋಪಿ ವಂಚಿಸಿದ್ದಾನೆ. ಈ ಮೂಲಕ ಸುಮಾರು 5.31 ಕೋಟಿ ರೂ ಹಣವನ್ನು ಆರೋಪಿ ಪಡೆದಿದ್ದಾನೆ ಎನ್ನಲಾಗಿದೆ.
ಆರೋಪಿ ಓಂಕಾರ್ ಮಹೇಂದ್ರ ವಿರುದ್ಧ ನಾಗ್ಪುರ ಕ್ರೈಂ ಬ್ರ್ಯಾಂಚ್ ಆರ್ಥಿಕ ವಿಭಾಗದಲ್ಲಿ ದೂರು ದಾಖಲಾಗಿದೆ. ಓಂಕಾರ್ ಮಹೇಂದ್ರ ಕೊಲೆ ಪ್ರಕರಣದ ಆರೋಪಿ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.