ತುಮಕೂರು: ಕೇಂದ್ರ ಸಚಿವ ವಿ. ಸೋಮಣ್ಣ ಅವರ ಹೆಸರಲ್ಲಿ ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧುಗಿರಿ ತಾಲೂಕಿನ ಮಲ್ಲನಾಯಕನಹಳ್ಳಿಯ ಗೋವರ್ಧನ್ ಬಂಧಿತ ಆರೋಪಿ. ಕೇಂದ್ರ ಸಚಿವ ವಿ. ಸೋಮಣ್ಣ ಅವರ ನಕಲಿ ಸಹಿ ಮತ್ತು ಲೆಟರ್ ಹೆಡ್ ಬಳಸಿ ವಂಚಿಸುತ್ತಿದ್ದ ಆರೋಪದ ಮೇಲೆ ಗೋವರ್ಧನ್ ನನ್ನು ಬಂಧಿಸಲಾಗಿದೆ.
ಈತ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಇತರೆ ಪ್ರಭಾವಿಗಳ ಹೆಸರಲ್ಲಿ ಜನರಿಗೆ ವಂಚಿಸಿರುವುದು ತನಿಖೆಯ ವೇಳೆ ಗೊತ್ತಾಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು, ಪಂಪ್ಸೆಟ್, ಮೋಟಾರ್ ನೀಡಲು ಸಚಿವ ಸೋಮಣ್ಣ ಹೆಸರಲ್ಲಿ ನಕಲಿ ಆದೇಶ ಪತ್ರ ಸೃಷ್ಟಿಸಲಾಗುತ್ತಿತ್ತು. ಅದೇ ರೀತಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕೊಡಿಸುವುದಾಗಿ, ವಿವಿಧ ಕಾಲೇಜುಗಳಲ್ಲಿ ಪ್ರವೇಶ ಕೊಡಿಸುವುದಾಗಿ ಜನರನ್ನು ವಂಚಿಸುತ್ತಿದ್ದಾಗಿ ಸಚಿವರ ಆಪ್ತ ಸಹಾಯಕ ಹೊಸ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.