ಹಸು ಮತ್ತು ಕತ್ತೆಗಳನ್ನು ಸಾಕಿದ್ದ ಫಾರಂ ಒಂದರ ಮಾಲೀಕರಿಗೆ ಉತ್ತಮ ತಳಿಯ ಕತ್ತೆಗಳನ್ನು ಕೊಡಿಸುವುದಾಗಿ ಹೇಳಿ ಬರೋಬ್ಬರಿ 9.45 ಲಕ್ಷ ರೂಪಾಯಿಗಳನ್ನು ವಂಚಿಸಲಾಗಿದ್ದು, ಇದೀಗ ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ರಾಮಾನುಪಾಡಿ ಗ್ರಾಮದ ಗೋದಾವರಿ ಫಾರಂ ಹೌಸ್ ಮಾಲೀಕ ಪಿ.ವಿ. ರವೀಂದ್ರ ವಂಚನೆಗೊಳಗಾದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಶೆನವ ಕುರುನಾಡು ಗ್ರಾಮದ ಶ್ರೀನಿವಾಸ ಗೌಡ ವಿರುದ್ಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶ್ರೀನಿವಾಸ ಗೌಡ ಕತ್ತೆಗಳನ್ನು ಸಾಗಾಣಿಕೆ ಮಾಡಿರುವ ಬಗೆ ಟಿವಿಯಲ್ಲಿ ವೀಕ್ಷಿಸಿದ್ದ ರವೀಂದ್ರ, ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ್ದು ಗೋದಾವರಿ ಫಾರಂ ಹೌಸ್ ಗೆ ಬಂದಿದ್ದ ಶ್ರೀನಿವಾಸಗೌಡ ಅಲ್ಲಿದ್ದ ಕತ್ತೆಗಳನ್ನು ನೋಡಿ ಇವು ಕಡಿಮೆ ಹಾಲು ಕೊಡುತ್ತಿವೆ. ರಾಜಸ್ಥಾನದ ತಲಾರಿ ತಳಿಯ ಕತ್ತೆಗಳನ್ನು ಕೊಡಿಸುತ್ತೇನೆ ಎಂದು ಹೇಳಿ ಮುಂಗಡವಾಗಿ 9.45 ಲಕ್ಷ ರೂಪಾಯಿಗಳನ್ನು ಪಡೆದಿದ್ದರು ಎನ್ನಲಾಗಿದೆ. ಆದರೆ ಈವರೆಗೂ ಕತ್ತೆಗಳನ್ನು ಕೊಡಿಸದ ಕಾರಣ ಈಗ ದೂರು ದಾಖಲಿಸಲಾಗಿದೆ.