ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ನ್ಯಾಯಬೆಲೆ ಅಂಗಡಿಯ ಮಾಲೀಕ ಅಂತ್ಯೋದಯ ಅಕ್ಕಿ ವಿತರಣೆಯಲ್ಲಿ ದಲಿತ ಮಹಿಳೆಗೆ ವಂಚಿಸಿದ್ದಾನೆ.
ಅಂಗಡಿಯ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಆರ್. ನವೀನ್ ಭರವಸೆ ನೀಡಿದ್ದಾರೆ. ಕುಕ್ಕಳಲೆ ಗ್ರಾಮದ ಬಡ ದಲಿತ ಮಹಿಳೆ ಜಾಜಮ್ಮ ಅವರು ಅಂತ್ಯೋದಯ ಕಾರ್ಡ್ ಹೊಂದಿದ್ದು, ಯೋಜನೆಯಡಿ ಪ್ರತಿ ತಿಂಗಳು 35 ಕೆಜಿ ಅಕ್ಕಿ ನೀಡಬೇಕಿದೆ. ಆದರೆ, ಅವರಿಗೆ ಕೇವಲ 10 ಕೆಜಿ ಅಕ್ಕಿ ನೀಡಿ ಉಳಿದ ಅಕ್ಕಿಯ ಹಣ ಖಾತೆಗೆ ಜಮಾ ಆಗಲಿದೆ ಎಂದು ವಂಚಿಸಿದ್ದಾರೆ.
ಈ ಬಗ್ಗೆ ಮಹಿಳೆ ಅಳಲು ತೋಡಿಕೊಂಡಿದ್ದು, ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಶನಿವಾರ ಆಹಾರ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕ ವಂಚಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.