ದೊಡ್ಡಬಳ್ಳಾಪುರ : ತಹಶೀಲ್ದಾರ್ ನಕಲಿ ಸಹಿ ಬಳಸಿಕೊಂಡು ಲಕ್ಷಾಂತರ ಹಣ ವಂಚಿಸಿದ ಆರೋಪದ ಮೇರೆಗೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ (ಆರ್ ಐ ) ಹೇಮಂತ್ ಕುಮಾರ್ ನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಜರಾಯಿ ಇಲಾಖೆ ಎಫ್ಡಿಎ ಕರ್ತವ್ಯದಿಂದ ಸಾಸಲು ಹೋಬಳಿ ಆರ್ ಐ ಆಗಿ ವರ್ಗಾವಣೆ ಆದ ಬಳಿಕ ಹೇಮಂತ್ ಕುಮಾರ್ ಅವರು ದಾಖಲೆಗಳನ್ನು ನೀಡುವ ವೇಳೆ ಚೆಕ್ ಬುಕ್ ಗಳನ್ನು ನೀಡದೆ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲವು ಕಂತುಗಳಲ್ಲಿ ತಹಶಿಲ್ದಾರ್ ಅವರ ನಕಲಿ ಸಹಿ ಬಳಸಿ 60 ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಿದ್ದಾರೆ ಎನ್ನಲಾಗಿದೆ.
ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು, ಹಣವನ್ನು ದೋಖಾ ಮಾಡಿರುವ ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ (RI) ಹೇಮಂತ್ ಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.