ಶಿವಮೊಗ್ಗ: ಚೆಕ್ ಕ್ಲಿಯರೆನ್ಸ್ ಬಗ್ಗೆ ಮಾಹಿತಿ ಪಡೆಯಲು ಗೂಗಲ್ ನಲ್ಲಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ನಂಬರ್ ಹುಡುಕಿ ಕರೆ ಮಾಡಿದ್ದ ಶಿವಮೊಗ್ಗದ ಶಿಕ್ಷಕಿಯೊಬ್ಬರ ಖಾತೆಯಿಂದ 9.19 ಲಕ್ಷ ರೂ. ಕಡಿತವಾಗಿದ್ದು, ಈ ಕುರಿತಾಗಿ ವಂಚನೆಗೊಳಗಾದ ಶಿಕ್ಷಕಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಯಾಂಕಿಗೆ ಹಾಕಿದ್ದ ಚೆಕ್ ಕ್ಲಿಯರೆನ್ಸ್ ಸ್ಥಿತಿಗತಿ ಕುರಿತಾಗಿ ಮಾಹಿತಿ ಪಡೆಯಲು ಶಿಕ್ಷಕಿ ಗೂಗಲ್ ನಲ್ಲಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮೊಬೈಲ್ ಫೋನ್ ನಂಬರ್ ಹುಡುಕಿದ್ದಾರೆ. ಅಲ್ಲಿ ದೊರೆತ ನಂಬರ್ ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಮಾತನಾಡಿದ್ದಾನೆ. ಆತ ಸೂಚಿಸಿದ ಅಪ್ಲಿಕೇಶನ್ ಅನ್ನು ಶಿಕ್ಷಕಿ ತಮ್ಮ ಮೊಬೈಲ್ ಫೋನ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ಚೆಕ್ ಕ್ಲಿಯರೆನ್ಸ್ ಗೆ 24 ಗಂಟೆ ಸಮಯವಾಗಲಿದೆ ಎಂದು ಆತ ತಿಳಿಸಿದ್ದಾನೆ.
ಮರುದಿನ ಶಿಕ್ಷಕಿ ಅದೇ ಸಂಖ್ಯೆಗೆ ಕರೆ ಮಾಡಿದ್ದು, ನಿಮ್ಮ ಚೆಕ್ ಇಂದು ಕ್ಲಿಯರೆನ್ಸ್ ಆಗಲಿದೆ ಎಂದು ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿದ್ದ ವ್ಯಕ್ತಿ ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿದೆ. ಒಟ್ಟು 9.19 ಲಕ್ಷ ರೂಪಾಯಿ ಬೇರೆ ಖಾತೆಗೆ ವರ್ಗಾವಣೆಯಾಗಿದ್ದು, ಮೋಸ ಹೋಗಿರುವುದನ್ನು ತಿಳಿದ ಶಿಕ್ಷಕಿ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.