ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವ ಅಮಿಷವೊಡ್ಡಿ ಎಂಟು ವಿದ್ಯಾರ್ಥಿಗಳ ಪೋಷಕರಿಂದ 6.38 ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಚೆನ್ನೈ ಮಹಿಳೆ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೈಟ್ಫೀಲ್ಡ್ ನಿವಾಸಿ ದೀಪ್ತಿ ಕೆ. ಸಿಂಹ ಎಂಬುವರು ನೀಡಿದ ದೂರಿನ ಮೇರೆಗೆ ಚೆನ್ನೈ ಮೂಲದ ಅನ್ನಾ ಜೇಕಬ್ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ನಗರದ ಖಾಸಗಿ ಶಾಲೆಯಲ್ಲಿ ದೂರುದಾರರಾದ ದೀಪ್ತಿ ಶಿಕ್ಷಕಿಯಾಗಿದ್ದು, ಪ್ರಸ್ತುತ ಮನೆ ಪಾಠ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ವಸುಂಧರಾ ಎಂಬುವರ ಮೂಲಕ ಅನ್ನಾ ಜೇಕಬ್ ಪರಿಚಯವಾಗಿದೆ. ತಾನು ಕೋರಮಂಗಲದ ಸೇಂಟ್ ಜಾನ್ ಮೆಡಿಕಲ್ ಕಾಲೇಜು ಹಾಗೂ ವೆಲ್ಲೂರಿನ ಸಿಎಂಸಿ ಮೆಡಿಕಲ್ ಕಾಲೇಜುಗಳಲ್ಲಿ ಟ್ರಸ್ಟಿಯಾಗಿದ್ದೇನೆ ಎಂದು ಆಕೆ ಪರಿಚಯಿಸಿಕೊಂಡಿದ್ದು, ಈ ಎರಡೂ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಎಂಡಿ ಮ್ಯಾನೇಜ್ಮೆಂಟ್ ಸೀಟುಗಳು ಖಾಲಿ ಇವೆ. ಅವುಗಳನ್ನು ಕೊಡಿಸುವುದಾಗಿ ತಿಳಿಸಿದ್ದು, ಯಾರಿಗಾದರೂ ಸೀಟು ಬೇಕಿದ್ದಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ನಂತರ ದೀಪ್ತಿ ಅವರು ಈ ವಿಚಾರವನ್ನು ಕೆಲವು ಪರಿಚಿತ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿದ್ದಾರೆ. ಎಂಟು ವಿದ್ಯಾರ್ಥಿಗಳ ಪೋಷಕರು ಎಂಜಿ ರಸ್ತೆಯ ಹೋಟೆಲ್ ವೊಂದರಲ್ಲಿ ಆರೋಪಿ ಅನ್ನಾ ಜೇಕಬ್ ಭೇಟಿಯಾಗಿ ಮಾತುಕತೆ ನಡೆಸಿದ್ದು, ಹಣ ನೀಡಿದಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ನಂತರ ಐದು ವಿದ್ಯಾರ್ಥಿಗಳ ಪೋಷಕರು ದೀಪ್ತಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಆ ಹಣವನ್ನು ದೀಪ್ತಿ ಚೆನ್ನೈ ಬ್ಯಾಂಕ್ ವೊಂದರ ಆರೋಪಿ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳ ಪೋಷಕರು ನೇರವಾಗಿ ಅನ್ನಾ ಜೇಕಬ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟು 8 ಮಂದಿಯಿಂದ 6.38 ಕೋಟಿ ರೂ. ಹಣ ಪಡೆದ ಅನ್ನಾ ಜೇಕಬ್ ಯಾವುದೇ ವೈದ್ಯಕೀಯ ಸೀಟು ಕೊಡಿಸದೆ ವಂಚಿಸಿದ್ದಾರೆ. ದೀಪ್ತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಸರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.