ಬಾಗಲಕೋಟೆ: ಮದುವೆಗೆ ಹುಡುಗಿ ಸಿಕ್ಕಿಲ್ಲ ಎಂದ ಬ್ರೋಕರ್ ಮಾತು ನಂಬಿದ ವ್ಯಕ್ತಿಯೊಬ್ಬ ಮೋಸ ಹೋದ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಪತ್ನಿ ಕೈಕೊಟ್ಟು ಹೋಗಿದ್ದಾಳೆ. ಮದುವೆ ಮಾಡಿಸಿಕೊಟ್ಟ ಬ್ರೋಕರ್ ವರನಿಂದ 4 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ.
ಬಾಗಲಕೋಟೆ ಜಿಲ್ಲೆ ಮುಧೋಳದ ಸೋಮಶೇಖರ್ ಮೋಸ ಹೋದ ವ್ಯಕ್ತಿ. ಈತನ ಮದುವೆಯಾಗಿದ್ದ ಶಿವಮೊಗ್ಗ ಮೂಲದ ಮಂಜುಳಾ ಸೇರಿದಂತೆ 7 ಮಂದಿ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮದುವೆಯಾಗಲು ಹುಡುಗಿಗಾಗಿ ಅಲೆದಾಡುತ್ತಿದ್ದ ಸೋಮಶೇಖರ್ ಗೆ ವಂಚಿಸಿದ ಬ್ರೋಕರ್ 4 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ.
ಜಮೀನು ಒತ್ತೆ ಇಟ್ಟು ಸೋಮಶೇಖರ್ ಅವರಿಗೆ ಹಣ ಕೊಟ್ಟಿದ್ದಾರೆ. ಮುಧೋಳದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಜುಳಾ ಜೊತೆಗೆ ಸೋಮಶೇಖರ್ ಮದುವೆಯಾಗಿದೆ. ಮದುವೆಯ ದಿನವೇ 7 ಜನರ ತಂಡ 4 ಲಕ್ಷ ರೂ. ಹಣ ಪಡೆದುಕೊಂಡಿದೆ.
ಮದುವೆಯಾದ ಒಂದು ತಿಂಗಳಲ್ಲಿ ಮಂಜುಳಾ ಪರಾರಿಯಾಗಿದ್ದಾಳೆ. ಆಕೆಯನ್ನು ವಿಚಾರಿಸಲು ಹೋದಾಗ ಈ ಮೊದಲೇ ಆಕೆಗೆ ಎರಡು ಮದುವೆಯಾಗಿರುವುದು ಗೊತ್ತಾಗಿದೆ. ಇದರಿಂದ ಬೇಸತ್ತ ಸೋಮಶೇಖರ್ ಹಣ ವಾಪಸ್ ಕೊಡುವಂತೆ ಬ್ರೋಕರ್ ಗಳಿಗೆ ಕೇಳಿಕೊಂಡಿದ್ದಾರೆ. ಆದರೆ ಅವರು ನಿರಾಕರಿಸಿದಾಗ ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.