ಬೆಂಗಳೂರು: ಬೆಂಗಳೂರಿನಲ್ಲಿ ಲೋನ್ ಕೊಡಿಸುವುದಾಗಿ ಸುಮಾರು 2000ಕ್ಕೂ ಹೆಚ್ಚು ಜನರಿಗೆ ನಾಲ್ವರು ವಂಚನೆ ಮಾಡಿದ್ದಾರೆ.
ಆನಂದ್, ರೇಷ್ಮಾ, ಅಂಜನ್, ಆನಿಯಾ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಯಾವುದೇ ಶ್ಯೂರಿಟಿ ಇಲ್ಲದಿದ್ದರೂ ಲೋನ್ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಗೆ ವಂಚಿಸಲಾಗಿದ್ದು, ಹೈ ಗ್ರೌಂಡ್ಸ್ ಠಾಣೆಯ ಪೊಲೀಸರು ರೇಷ್ಮಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಶ್ರೀಕರ ಕೋ ಆಪರೇಟಿವ್ ಸೊಸೈಟಿಯಲ್ಲಿ ಒಂದು ಲಕ್ಷದಿಂದ 25 ಲಕ್ಷ ರೂ. ವರೆಗೂ ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಲಾಗಿದೆ. ಸಾರ್ವಜನಿಕರಿಗೆ ಲೋನ್ ಕೊಡಿಸಲು ಸಾವಿರಾರು ರೂಪಾಯಿ ಪಡೆದುಕೊಂಡಿದ್ದಾರೆ. 15 ದಿನದ ಒಳಗೆ ಲೋನ್ ಮಾಡಿಕೊಡಲಾಗುವುದು ಎಂದು ಹೇಳಿ ಪ್ರೊಸೆಸಿಂಗ್ ಫೀಜ್, ಖಾತೆ ಓಪನ್ ಮಾಡಲು ಬೇಕಿದೆ ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ.
ಲೋನ್ ಗೆ ಅಪ್ಲೈ ಮಾಡಿದ್ದ ಸಾರ್ವಜನಿಕರ ಮೊಬೈಲ್ ನಂಬರ್ ಅನ್ನೇ ಲೋನ್ ಅಕೌಂಟ್ ನಂಬರ್ ಎಂದು ನಾಲ್ವರು ಆರೋಪಿಗಳು ನೀಡಿದ್ದು, 2000ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ಹಣ ವಂಚಿಸಿದ ಆರೋಪ ಕೇಳಿ ಬಂದಿದೆ.
ಹಣ ವಾಪಸ್ ಕೇಳಿದರೆ ಪ್ರಭಾವಿಗಳ ಹೆಸರು ಹೇಳಿ ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.