ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗ ಜಿಲ್ಲೆ, ಸಾಗರದ ಗ್ಯಾಸ್ ಬಂಕ್ ಅನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.
ಆವಿನಹಳ್ಳಿ ರಸ್ತೆಯ ಗೋ ಗ್ಯಾಸ್ ಎಲ್ ಪಿ ಜಿ ಕಂಪನಿ ಮಾಲೀಕತ್ವದ ಈ ಬಂಕ್ ಅನ್ನು ಶಿವಮೊಗ್ಗದ ಮಹೇಶ್ವರಪ್ಪ ಎಂಬವರು ಗುತ್ತಿಗೆಗೆ ಪಡೆದಿದ್ದು, ವಾಹನಗಳಿಗೆ ಗ್ಯಾಸ್ ತುಂಬುವ ವೇಳೆ ಅಳತೆಯ ನಿಖರತೆ ಕಾಪಾಡುವ ಸಲುವಾಗಿ ಕಂಪನಿ ವತಿಯಿಂದ ಮದರ್ ಬೋರ್ಡ್ ಅಳವಡಿಸಲಾಗಿತ್ತು.
ಆದರೆ ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದ ಮಹೇಶ್ವರಪ್ಪ ಈ ಮದರ್ ಬೋರ್ಡ್ ಬದಲಾಯಿಸಿ ಮತ್ತೊಂದು ಮದರ್ ಬೋರ್ಡ್ ಅಳವಡಿಸಿದ್ದು, ಇದು ಗೋ ಗ್ಯಾಸ್ ಎಲ್ ಪಿ ಜಿ ಕಂಪನಿಯ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜುಲೈ 5 ರಂದು ಕಂಪನಿಯ ವಿಚಕ್ಷಣ ಸಿಬ್ಬಂದಿ ಪರಿಶೀಲನೆಗೆ ಆಗಮಿಸಿದ್ದರು.
ಪರಿಶೀಲನೆಗೆ ಕಂಪನಿಯವರು ಆಗಮಿಸಿದ್ದ ವಿಷಯ ತಿಳಿದ ಮಹೇಶ್ವರಪ್ಪ ಮದರ್ ಬೋರ್ಡ್ ಬದಲಾಯಿಸುವ ಪ್ರಯತ್ನದಲ್ಲಿದ್ದ ವೇಳೆ ವಿಚಕ್ಷಣ ದಳದ ಸಿಬ್ಬಂದಿಯನ್ನು ನೋಡಿ ಪರಾರಿಯಾಗಿದ್ದರು.
ಬಳಿಕ ಕಂಪನಿಯ ಅಧಿಕಾರಿಗಳು ಜುಲೈ 8ರಂದು ಶಿವಮೊಗ್ಗದ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರು ನೀಡಿದ್ದು, ಬುಧವಾರದಂದು ಸ್ಥಳಕ್ಕೆ ಆಗಮಿಸಿದ ಇಲಾಖಾ ಸಿಬ್ಬಂದಿ ಮಹಜರು ನಡೆಸಿ ಬಂಕ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.