
ಬೆಂಗಳೂರು: ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ಮಾರಾಟಕ್ಕೆ ಯತ್ನಿಸಿದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಬಿಕುಲ್ ಇಸ್ಲಾಂ, ಇದೀಶ್ ಅಲಿ, ಅನ್ವರ್ ಹುಸೇನ್ ಬಂಧಿತ ಆರೋಪಿಗಳು. ಮನೆ ಪಾಯ ಹಾಕುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ಆರೋಪಿಗಳು ಹೇಳಿಕೊಂಡಿದ್ದು, ಚಿನ್ನದ ಬೆಲೆಗಿಂತ ಅರ್ಧ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ನಂಬಿಸಿದ್ದರು.
ಮರದ ಹಲಗೆ ಹಾಗೂ ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿದ್ದ ಖದೀಮರು ನಂಬಿಕೆ ಗಳಿಸಲು ಮೊದಲು ಒಂದೆರಡು ಗ್ರಾಂ ಅಸಲಿ ಚಿನ್ನ ನೀಡಿದ್ದರು. ನಂತರ ನಕಲಿ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದರು. ಚಿನ್ನ ತೆಗೆದುಕೊಳ್ಳಲು ಬರುವಂತೆ ಹೇಳಿ ಪದೇ ಪದೇ ಲೊಕೇಶನ್ ಚೇಂಜ್ ಮಾಡುತ್ತಿದ್ದರು.
ಇಟ್ಟಿಗೆ ಹಾಗೂ ಮರದ ತುಂಡಿಗೆ ಬಣ್ಣ ಬಳಿದು ಮಾರಲು ಯತ್ನಿಸಿದ್ದರು. ಮಾಹಿತಿಯ ಮೇರೆಗೆ ಕೋರಮಂಗಲದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ. ಸದ್ಯ ಮೂವರನ್ನು ಬಂಧಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.