ಬೆಂಗಳೂರು: ದಾಬಸ್ ಪೇಟೆ ಸೋಂಪುರ ಹೋಬಳಿ ಕಂಬಾಳು ಸಂಸ್ಥಾನ ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಬೆಂಗಳೂರಿನ ಯುವತಿ ಹಾಗೂ ಆಕೆಯ ಸಹಚರರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿ ಮಠದ ಮಾನ ಕಳೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸ್ವಾಮೀಜಿ ದೂರು ದಾಖಲಿಸಿದ್ದಾರೆ. ಆದರೆ, ದೂರಿನಲ್ಲಿ ಹೆಸರಿಸಲಾದ ವರ್ಷಾ ಎನ್ನುವ ಯುವತಿಯೇ ಇಲ್ಲ. ವರ್ಷಾ ಹೆಸರಿನಲ್ಲಿ ಆರೋಪಿ ಮಂಜುಳಾ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಸ್ವಾಮೀಜಿಯನ್ನು ವಂಚಿಸಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ವರ್ಷಾ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆರೋಪಿ ನಂತರ ಶಿಕ್ಷಣಕ್ಕಾಗಿ ಸಹಾಯ ಮಾಡುವಂತೆ ಎರಡು ಲಕ್ಷ ರೂ. ಪಡೆದಿದ್ದು, ನಂತರ ಹಂತ ಹಂತವಾಗಿ 55 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಮಠದ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಈ ಕುರಿತಾಗಿ ಸ್ವಾಮೀಜಿ ದೂರು ನೀಡಿದ್ದು, ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದ ಮಂಜುಳಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಉಳಿದ ಆರೋಪಿಗಳ ಮಾಹಿತಿ ಕಲೆ ಹಾಕಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಲಾಗಿದೆ.