ಬೆಂಗಳೂರು: ಪೂರ್ವಾಪರ ಗಮನಿಸದೇ ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಎಚ್ಚರಿಕೆ ನೀಡುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಸೈಬರ್ ವಂಚಕರ ಅಮಿಷಕ್ಕೆ ಒಳಗಾಗಿ ಆನ್ ಲೈನ್ ನಲ್ಲಿ ಮೊಟ್ಟೆ ಖರೀದಿಸಲು ಮುಂದಾಗಿ 48,199 ರೂಪಾಯಿ ಕಳೆದುಕೊಂಡಿದ್ದಾರೆ. ವಸಂತನಗರದ 38 ವರ್ಷದ ಮಹಿಳೆಗೆ ಇಮೇಲ್ ನಲ್ಲಿ ಜಾಹೀರಾತು ಬಂದಿದ್ದು, ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ ಹೆಸರನ್ನು ಹೊಂದಿತ್ತು. ಗುಣಮಟ್ಟದ ಮೊಟ್ಟೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುವುದಾಗಿ ಆಕರ್ಷಕ ಚಿತ್ರಗಳ ಸಹಿತ ಜಾಹೀರಾತು ಪ್ರಕಟಿಸಲಾಗಿದ್ದು, ಮೊಟ್ಟೆ ಖರೀದಿಗೆ ವಿವಿಧ ತರಹದ ಆಫರ್ ನೀಡಲಾಗಿತ್ತು.
ನಾಲ್ಕು ಡಜನ್ ಮೊಟ್ಟೆಗಳನ್ನು 49 ರೂ.ಗೆ ನೀಡುವುದಾಗಿ ಹೇಳಿದ್ದು, ಗೃಹಿಣಿ ಅದನ್ನು ಆಯ್ಕೆ ಮಾಡಿದಾಗ ಕ್ರೆಡಿಟ್ ಕಾರ್ಡ್ ಮಾಹಿತಿ ತುಂಬಲು ಸೂಚಿಸಲಾಗಿದೆ. ತಮ್ಮ ಕ್ರೆಡಿಟ್ ಕಾರ್ಡ್ ಸಿವಿವಿ ಮತ್ತು ಎಕ್ಸ್ಪೈರಿ ದಿನಾಂಕ ನಮೂದಿಸಿದ ಕೂಡಲೇ ಅವರ ಮೊಬೈಲ್ ಗೆ ಒಟಿಪಿ ಬಂದಿದೆ. ಒಟಿಪಿಯನ್ನು ಎಂಟ್ರಿ ಮಾಡಿದಾಗ ಅವರ ಖಾತೆಯಿಂದ ಶೈನ್ ಮೊಬೈಲ್ ಹೆಚ್.ಯು. ಹೆಸರಿನ ಖಾತೆಗೆ 48,199 ರೂ. ವರ್ಗಾವಣೆಯಾಗಿದೆ.
ಆದಾದ ನಂತರ ನಡೆದ ವ್ಯವಹಾರದ ಬಗ್ಗೆ ಖಚಿತಪಡಿಸಿಕೊಳ್ಳಲು ಅವರಿಗೆ ಕ್ರೆಡಿಟ್ ಕಾರ್ಡ್ ಬ್ಯಾಂಕ್ ನಿಂದ ಕರೆ ಮಾಡಲಾಗಿದೆ. ಮಹಿಳೆ ತಮಗಾದ ಮೋಸವನ್ನು ಬ್ಯಾಂಕ್ ಗಮನಕ್ಕೆ ತಂದಿದ್ದು, ಅವರು ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದಾರೆ. ಬ್ಯಾಂಕ್ ನವರ ಸಲಹೆಯಂತೆ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.