ಬೆಂಗಳೂರು: ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಗೆ ಹಾಜರಾದ ಮಾಜಿ ಸಚಿವ ವರ್ತೂರು ಪ್ರಕಾಶ್, ನಗದು ಹಣ, ಚಿನ್ನದ ಉಂಗುರ, ಬ್ರಾಸ್ ಲೆಟ್ ಗಳನ್ನು ವಾಪಾಸ್ ನೀಡಿದ್ದಾರೆ.
ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ವರ್ತೂರು ಪ್ರಕಾಶ್, ಎಸಿಪಿ ಗೀತಾ ಅವರಿಂದ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ವಂಚನೆ ಪ್ರಕರಣದ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್ ಗಳನ್ನು ವಾಪಾಸ್ ನೀಡಿದ್ದಾರೆ.
12.50 ಲಕ್ಷ ನಗದು ಹಣ, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರು ಪ್ರಕಾಶ್, ಶ್ವೇತಾ ಗೌಡ 6 ತಿಂಗಳ ಹಿಂದಷ್ಟೇ ಪರಿಚಯ. ಆಕೆ ಹೀಗೆ ಮಾಡುತ್ತಾಳೆ ಎಂದು ನನಗೆ ಗೊತ್ತಿರಲಿಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ಗಿಫ್ಟ್ ಅಂತ ಶ್ವೇತಾ ಗೌಡ ನನಗೆ ಕೆಲ ಒಡವೆ ನೀಡಿದ್ದಳು ಎಂದಿದ್ದಾರೆ.
ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಖರೀದಿ ಮಾಡಿದ್ದಾಳೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಾಭರಣವನ್ನೌ ಆಕೆಗೆ ಕೊಟ್ಟಿದ್ದಾರೆ. ಅದು ಹೇಗೆ ಕೊಟ್ಟರು? ಗೊತ್ತಿಲ್ಲ. ನನ್ನ ತರಹ ಹಲವು ರಾಜಕಾರಣಿಗಳ ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ವಂಚನೆ ಮಾಡುವುದೇ ಆಕೆ ಕೆಲಸ. ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.