ನಟ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ ಪ್ರಕರಣ ಸಂಬಂಧ ನಿರ್ಮಾಪಕ ಉಮಾಪತಿ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ದರ್ಶನ್ ಸ್ನೇಹಿತರಿಂದಲೇ ನನಗೆ ಬೆದರಿಕೆ ಇದೆ. ಹರ್ಷ, ಶರ್ಮ, ರಾಕೇಶ್ರಿಂದ ನನಗೆ ಬೆದರಿಕೆ ಇದೆ. ದರ್ಶನ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಚರ್ಚೆ ಮೂಲಕ ಇದನ್ನ ಬಗೆಹರಿಸಿಕೊಳ್ಳಲ್ಲ. ಕಾನೂನು ಮೂಲಕವೇ ಇದಕ್ಕೆ ಪರಿಹಾರ ಹುಡುಕುತ್ತೇವೆ ಎಂದು ಹೇಳಿದ್ರು.
ನಾನು ದರ್ಶನ್ ಸರ್ಗೆ ಬೆಲೆ ಕೊಟ್ಟು ಮಾತನಾಡುತ್ತೇನೆ. ನನ್ನ ಹಾಗೂ ದರ್ಶನ್ ನಡುವೆ ಒಡನಾಟ ಚೆನ್ನಾಗಿಯೇ ಇದೆ. ನಾನು ದರ್ಶನ್ರಿಗೆ ಅರುಣಾ ಕುಮಾರಿಯನ್ನ ಭೇಟಿ ಮಾಡಿಸಿಯೇ ಇಲ್ಲ. ಭಗವಂತ ನನಗೆ ಒಳ್ಳೆಯ ಜೀವನ ಕೊಟ್ಟಿದ್ದಾನೆ. ನಾನು ಅದರಂತೆಯೇ ಜೀವನ ನಡೆಸುತ್ತೇನೆ. ಈ ರೀತಿ ಮೋಸ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ರು.
ಪ್ರಕರಣದಲ್ಲಿ ನನ್ನನ್ನ ಯಾರೋ ಬೇಕೆಂತಲೇ ಸಿಲುಕಿಸುತ್ತಿದ್ದಾರೆ. ಆರೋಪಿಗಳೆಲ್ಲ ಬೆಂಗಳೂರಿನಲ್ಲೇ ಇದ್ದಾರೆ. ಪೊಲೀಸರ ತನಿಖೆಯಲ್ಲಿ ಎಲ್ಲವೂ ಬಯಲಾಗುತ್ತದೆ. ಜೂನ್ ತಿಂಗಳಲ್ಲಿ ನಾನು ಅರುಣಾ ಹಾಗೂ ದರ್ಶನ್ ಕಾನ್ಫರೆನ್ಸ್ ಕಾಲ್ನಲ್ಲಿ ಮಾತನಾಡಿದ್ದೇವೆ. ಜೂನ್ ನಾಲ್ಕನೇ ವಾರ ಪೊಲೀಸರು ಠಾಣೆಗೆ ನನ್ನನ್ನ ಕರೆಸಿದ್ದರು. ಆಗ ಅದೇ ಠಾಣೆಯಲ್ಲಿ ಅರುಣಾ ಕುಮಾರಿ ಕೂಡ ಇದ್ದರು ಎಂದು ಹೇಳಿದ್ದಾರೆ.
ನನಗೆ 25 ಕೋಟಿ ದೊಡ್ಡ ವಿಚಾರವೇ ಇಲ್ಲ. ನಾನು ಯಾರದ್ದೋ ಭಿಕ್ಷೆಯಲ್ಲಿ ಬದುಕುತ್ತಿಲ್ಲ. ನನ್ನ ತಂದೆಯ ಭಿಕ್ಷೆಯಲ್ಲಿ ಬದುಕುತ್ತಿದ್ದೇನೆ. ನಾನು ನನ್ನ ಪೋಷಕರು ಹಾಗೂ ಪತ್ನಿಗೆ ಮಾತ್ರ ಉತ್ತರ ಕೊಡಬೇಕು. ಜನರು ಏನು ಅಂದುಕೊಳ್ತಾರೆ ಅನ್ನೋದು ನನಗೆ ಸಂಬಂಧಿಸಿದ್ದಲ್ಲ. ಆದರೂ ದರ್ಶನ್ರಿಗೆ ಬೆಲೆ ಕೊಟ್ಟು ಈಗ ಮಾತನಾಡುತ್ತಿದ್ದೇನೆ. 24 ಗಂಟೆಯಲ್ಲಿ ಪ್ರಕರಣದ ಆಯಾಮವೇ ಬದಲಾಗಿ ಹೋಗಿದೆ. ಯಾರಿಗೊತ್ತು ಇನ್ನೊಂದು 24 ಗಂಟೆಯಲ್ಲಿ ಸತ್ಯಾಂಶವೇ ಹೊರಬರಬಹುದು ಎಂದು ಹೇಳಿದ್ರು.
ನಾನು ದರ್ಶನ್ ನಂಬಿ ಬದುಕುತ್ತಿಲ್ಲ. ದರ್ಶನ್ ಕೂಡ ನನ್ನನ್ನ ನಂಬಿ ಬದುಕುತ್ತಿಲ್ಲ. ಅವರಿಲ್ಲದೇ ನಾನು ಬದುಕಬಲ್ಲೆ. ಅವರೂ ಕೂಡ ನಾನಿಲ್ಲದೇ ಬದುಕಬಲ್ಲರು. ಆದರೆ ನನಗೆ ಯಾರನ್ನೂ ಕಳೆದುಕೊಳ್ಳಲು ಇಷ್ಟವಿಲ್ಲ. ಈ ಪ್ರಕರಣದಲ್ಲಿ ಬೇರೆ ಏನೋ ನಡೆಯುತ್ತಿದೆ. ರೆಸಾರ್ಟ್ನಲ್ಲಿ ಹರ್ಷ ಕೂಡ ನನ್ನ ಜೊತೆ ಚೆನ್ನಾಗಿ ಮಾತನಾಡಿದ್ದಾರೆ. ನನ್ನ ಹರ್ಷ ನಡುವೆಯೂ ಯಾವುದೇ ವೈಮನಸ್ಯ ಇಲ್ಲ. ನನ್ನ ಆಸ್ತಿ ಯಾರಿಗೂ ಕಡಿಮೆ ಇಲ್ಲ. ನನ್ನ ಬಳಿ ಎಕರೆಗಟ್ಟಲೇ ಆಸ್ತಿ ಇದೆ. ನನಗೆ ಈ ರೀತಿ ಇನ್ನೊಬ್ಬರ ಆಸ್ತಿ ಹೊಡೆಯೋ ಅವಶ್ಯಕತೆ ಇಲ್ಲ. ಇದು ನನ್ನ ಯೋಗ್ಯತೆ ಎಂದು ಹೇಳಿದ್ರು.
ನನಗೆ ಸಿನಿಮಾ ನಂಬಿಕೊಂಡೇ ಜೀವನ ಮಾಡಬೇಕು ಅಂತೇನಿಲ್ಲ. ಯಾರನ್ನೋ ಸಿಲುಕಿಸಬೇಕು ಅನ್ನೋ ಪ್ರಯತ್ನವೂ ನನ್ನದಲ್ಲ. ಏನೋ ನಡೆಸುತ್ತಿದ್ದಾರೆ, ನಡೆಸಲಿ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಒಂದೊಂದೇ ಹೊರಬರಲಿದೆ. ಕೇಸ್ ತನಿಖೆ ಆದ್ಮೇಲೆ ಸತ್ಯ ತಾನಾಗೇ ಹೊರಬರುತ್ತದೆ. ದರ್ಶನ್ ಸರ್ಗೆ ಬೆಲೆ ಕೊಟ್ಟು ಇಷ್ಟು ತಾಳ್ಮೆಯಿಂದ ನಾನು ಮಾತನಾಡುತ್ತಿದ್ದೇನೆ. ನಾನು ಈಗಲೇ ಎಲ್ಲರ ಹೆಸರು ಬಹಿರಂಗ ಮಾಡಬಹುದು. ಆದರೆ ಇದರಿಂದ ಪ್ರಕರಣದ ದಿಕ್ಕು ತಪ್ಪುತ್ತದೆ ಎಂದು ಹೇಳಿದ್ರು.