ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಟಿಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ 80 ಲಕ್ಷ ರೂ. ಪಡೆದು ವಂಚಿಸಿದ್ದ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ನಕಲಿ ನೇಮಕಾತಿ ಆದೇಶ ವಿತರಿಸಿ ವಂಚಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಕಲಬುರಗಿ ವಿದ್ಯಾನಗರದ ಲಕ್ಷ್ಮಿಕಾಂತ ಹೊಸಮನಿ, ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕುಲಪ್ಪಸಿಂಗೆ, ಉತ್ತರಹಳ್ಳಿಯ ಮುರಳಿ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ವಿಜಯಪುರ ಜಿಲ್ಲೆಯ ಭೀಮರಾವ್, ಬಸು ಕಾಸಪ್ಪ ಮಯೂರ, ಶ್ರೀಧರ, ಸಂತೋಷ್ ನಾಯಕ ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.
ವಂಚನೆಗೊಳಗಾದ ಆಲಮೇಲದ ಹುಸೇನಪ್ಪ ಮಾಡ್ಯಾಳ ಸಿಸಿಬಿ ಠಾಣೆಗೆ ದೂರು ನೀಡಿದ್ದು, ಸಿಸಿಬಿ ಇನ್ಸ್ಪೆಕ್ಟರ್ ದೇವೇಂದ್ರಪ್ಪ ನೇತೃತ್ವದ ತಂಡ ತನಿಖೆ ನಡೆಸಿ ತಾಂತ್ರಿಕ ಮಾಹಿತಿ ಆಧರಿಸಿ ಮೌರ್ಯ ಹೋಟೆಲ್ ಜಂಕ್ಷನ್ ಮತ್ತು ಹೊಸಕೆರೆಹಳ್ಳಿ ಬಸ್ ನಿಲ್ದಾಣದ ಸಮೀಪ ಆರೋಪಿಗಳನ್ನು ಬಂಧಿಸಿದೆ.
ಕಲಬುರಗಿಯ ಲಕ್ಷ್ಮಿಕಾಂತ ಎಲೆಕ್ಟ್ರಿಕ್ ಗುತ್ತಿಗೆದಾರನಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಂಪರ್ಕವಿದೆ ಎಂದು ಹೇಳಿಕೊಂಡು ನಿರುದ್ಯೋಗಿಗಳಿಗೆ ವಂಚಿಸಿದ್ದ. ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ತಲಾ ಒಬ್ಬರಿಂದ 16ರಿಂದ 20 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದ. ನಕಲಿ ನೇಮಕಾತಿ ಆದೇಶವನ್ನು ಈ ತಂಡ ವಿತರಿಸಿದ್ದು, ಉದ್ಯೋಗ ಸಿಕ್ಕ ಖುಷಿಯಲ್ಲಿ ಮುಂಬೈ ಮತ್ತು ಕಾನ್ಪುರಕ್ಕೆ ತರಬೇತಿಗೆ ಹೋಗಿದ್ದ ಅಭ್ಯರ್ಥಿಗಳಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ರೈಲ್ವೆ ಅಧಿಕಾರಿಗಳು ದಾಖಲೆಗಳ ಪರಿಶೀಲಿಸಿದಾಗ ನಕಲಿ ನೇಮಕಾತಿ ಆದೇಶ ಎಂದು ತಿಳಿದುಬಂದಿದ್ದು. ನಂತರ ಪೊಲೀಸರ ಮೊರೆ ಹೋಗಿದ್ದರು.