ದಾವಣಗೆರೆ: ಮದುವೆಯಾಗುವುದಾಗಿ, ಉದ್ಯೋಗ ಕೊಡಿಸುವುದಾಗಿ ಎಂಟು ಕಡೆ ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಮಧು(31) ಬಂಧಿತ ಆರೋಪಿ. ದಾವಣಗೆರೆ, ಬೆಂಗಳೂರು, ಮೈಸೂರು, ಹರಿಹರ, ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ಎಂಟು ಕಡೆಯಲ್ಲಿ ಯುವತಿಯರಿಗೆ ಮದುವೆಯಾಗುವುದಾಗಿ, ಉದ್ಯೋಗ ಕೊಡಿಸುವುದಾಗಿ ಸುಮಾರು 63 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ.
ಈ ಬಗ್ಗೆ ದಾವಣಗೆರೆ ಮೂಲದ ಯುವತಿ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕನ್ನಡ ಮ್ಯಾಟ್ರಿಮೋನಿಲ್ ಆ್ಯಪ್ ನೋಡುವಾಗ ಪರಿಚಿತನಾಗಿದ್ದ ಮಧು, ನಿಮ್ಮ ಪ್ರೊಫೈಲ್ ನೋಡಿದ್ದು, ಮದುವೆಯಾಗಲು ಒಪ್ಪಿದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ. ಪ್ರತಿದಿನ ವಿವಿಧ ಮೊಬೈಲ್ ನಂಬರ್ ಗಳಿಂದ ವಾಟ್ಸಾಪ್ ಚಾಟ್ ಹಾಗೂ ಕರೆ ಮಾಡುತ್ತಿದ್ದ. ಮೈಸೂರಿನಲ್ಲಿ ರೈಲ್ವೆ ಇಲಾಖೆ ವರ್ಕಿಂಗ್ ಇಂಜಿನಿಯರ್ ಆಗಿದ್ದು, ತಮ್ಮ ಇಲಾಖೆಯಲ್ಲಿಯೇ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್ಲೈನ್ ಮೂಲಕ ಹಂತ ಹಂತವಾಗಿ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದಾನೆ.
ಆತನಿಂದ ವಂಚನೆಗೊಳಗಾದ ಯುವತಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಆರೋಪಿ ಮಧು ಇದೇ ರೀತಿ ಹಲವು ಕಡೆಗಳಲ್ಲಿ ಯುವತಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಗೊತ್ತಾಗಿದೆ.