ಹಾವೇರಿ: ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದ ಯೂನಿಯನ್ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿ, ಗ್ರಾಹಕರಿಗೆ ವಂಚಿಸಿದ್ದ ಆರೋಪದ ಮೇಲೆ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿಯನ್ನು ಹಾವೇರಿಯ ಸಿಇಎನ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರ್ಚನಾ ಬೆಟಗೇರಿ ಬಂಧಿತ ಸಹಾಯಕ ವ್ಯವಸ್ಥಾಪಕಿ. ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರವಿರಾಜ ಅವರು ಅರ್ಚನಾ ಬೆಟಗೇರಿ, ದಿನಗೂಲಿ ಕೆಲಸಗಾರ ಶಾಂತಪ್ಪ, ಬ್ಯುಸಿನೆಸ್ ಕರೆಸ್ಪಾಂಡೆಂಟ್ ಪ್ರವೀಣ್ ಎಂಬುವರ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.
ಅರ್ಚನಾ ಅವರು ಶಾಂತಪ್ಪ ಮತ್ತು ಪ್ರವೀಣನೊಂದಿಗೆ ಸೇರಿ ಕುರುಬಗೊಂಡ ಬ್ಯಾಂಕ್ ಆವರಣದಲ್ಲಿರುವ ಎಟಿಎಂನಿಂದ 31.33 ಲಕ್ಷ ರೂ. ನಗದು ತುಂಬಿಕೊಂಡು ಹೋಗಿದ್ದಾರೆ. 13 ಗ್ರಾಹಕರು ಬ್ಯಾಂಕಿನಲ್ಲಿ ಚಿನ್ನಾಭರಣ ಒತ್ತೆ ಇಟ್ಟು ಸಾಲ ಪಡೆದಿದ್ದ ಒಟ್ಟು 49.47 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ.
ಬ್ಯಾಂಕಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸುಳ್ಳು ಲೆಕ್ಕ ನಮೂದಿಸಿ ಗ್ರಾಹಕರಿಂದ ಪಡೆದ ಡೆಪಾಸಿಟ್ ಹಣದ ಬಗ್ಗೆ ಕಂಪ್ಯೂಟರ್ ಗಳಲ್ಲಿ ದಾಖಲಿಸದೆ ವಂಚನೆ ಮಾಡಿದ್ದಾರೆ. ಗ್ರಾಹಕರ 1.12 ಕೋಟಿ ರೂ. ನಗದು ಮತ್ತು 49.47 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸೇರಿ 1.62 ಕೋಟಿ ರೂ. ವಂಚಿಸಿದ ಬಗ್ಗೆ ಅರ್ಚನಾ ಬೆಟಗೇರಿ ವಿರುದ್ಧ ದೂರು ನೀಡಲಾಗಿದೆ.
ಎರಡೂವರೆ ವರ್ಷಗಳಿಂದ ಪ್ರಭಾರ ವ್ಯವಸ್ಥಾಪಕಿಯಾಗಿದ್ದ ಅರ್ಚನಾ ಗ್ರಾಹಕರಿಂದ ಹಣ ಪಡೆದು ರಸೀದಿ ಮತ್ತು ಭದ್ರತಾ ಪತ್ರಗಳಿಗೆ ಸಹಿ ಮಾಡಿ ಸೀಲು ಹಾಕಿ ಗ್ರಾಹಕರಿಗೆ ಕೊಟ್ಟಿದ್ದಾರೆ. ಆದರೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡದೆ ತಾವೇ ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.