ಫ್ರಾನ್ಸ್‌ನಲ್ಲಿ ಭಾರೀ ರಾಜಕೀಯ ಕ್ರಾಂತಿಯ ನಂತರ ಗೇಬ್ರಿಯಲ್ ಅಟ್ಟಲ್ ಪ್ರಧಾನಿ ಗದ್ದುಗೆ ಏರಿದ್ದಾರೆ. ವಿಶೇಷವೆಂದರೆ ಗೇಬ್ರಿಯಲ್ ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿ. ಅವರ ವಯಸ್ಸು ಕೇವಲ 34 ವರ್ಷಗಳು. ಅಷ್ಟೇ ಅಲ್ಲ ಗೇಬ್ರಿಯಲ್ ಸಲಿಂಗಕಾಮಿ, ತನ್ನ ಈ ಗುರುತನ್ನು ಯಾರಿಂದಲೂ ಮರೆಮಾಡಿಲ್ಲ. ಇತ್ತೀಚಿನ ರಾಜಕೀಯ ಉದ್ವಿಗ್ನತೆಯ ನಂತರ ಎಲಿಜಬೆತ್ ಬೋರ್ನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಬಲಪಂಥೀಯರಿಂದ ಹೆಚ್ಚುತ್ತಿರುವ ರಾಜಕೀಯ ಒತ್ತಡದ ನಡುವೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಉಳಿದ ಅವಧಿಗೆ ಗೇಬ್ರಿಯಲ್ ಅಟ್ಟಲ್ ಅವರನ್ನು ಫ್ರಾನ್ಸ್‌ನ ಅತ್ಯಂತ ಕಿರಿಯ ಪ್ರಧಾನಿ ಎಂದು ಹೆಸರಿಸಿದ್ದಾರೆ. ಗೇಬ್ರಿಯಲ್ ಈ ಹಿಂದೆ ಸರ್ಕಾರದ ವಕ್ತಾರರಾಗಿ ಮತ್ತು ಶಿಕ್ಷಣ ಸಚಿವರಾಗಿ ಗುರುತಿಸಿಕೊಂಡಿದ್ದರು. ತಮ್ಮ ಸಲಿಂಗಕಾಮವನ್ನು ಮರೆಮಾಚದ ಫ್ರಾನ್ಸ್‌ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ವಿದೇಶೀಯರನ್ನು ಗಡೀಪಾರು ಮಾಡುವ ಸರ್ಕಾರದ ಸಾಮರ್ಥ್ಯವನ್ನು ಬಲಪಡಿಸುವ ವಲಸೆ ಕಾನೂನಿನ ಮೇಲೆ ಇತ್ತೀಚಿನ ರಾಜಕೀಯ ಪ್ರಕ್ಷುಬ್ಧತೆ ಏರ್ಪಟ್ಟಿತ್ತು. ಪರಿಣಾಮ ಎಲಿಜಬೆತ್ ಬಾರ್ನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೋಮವಾರ ಪ್ರಧಾನಿ ಎಲಿಜಬೆತ್ ಬಾರ್ನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ವಿವಾದಿತ ಕಾನೂನಿಗೆ ಅಧ್ಯಕ್ಷ ಮ್ಯಾಕ್ರನ್ ಬೆಂಬಲವಿದೆ. ಮ್ಯಾಕ್ರನ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2027ರಲ್ಲಿ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ.