ಆನ್ಲೈನ್ನಲ್ಲಿ ಮಕ್ಕಳ ಖಾಸಗೀತನ ಕಾಪಾಡುವ ನೂತನ ಕಾಯಿದೆಯೊಂದಕ್ಕೆ ಫ್ರಾನ್ಸ್ನ ಜನಪ್ರತಿನಿಧಿಗಳು ಅನುಮೋದನೆ ಕೊಟ್ಟಿದ್ದಾರೆ. ಈ ನೂತನ ಕಾಯಿದೆ ಪ್ರಕಾರ ಖುದ್ದು ಪೋಷಕರೇ ಆದರೂ ಸಹ ತಮ್ಮ ಮಕ್ಕಳ ಅನುಮತಿ ಇಲ್ಲದೇ ಅವರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಂತಿಲ್ಲ.
ಸಂಸದ ಬರ್ನೋ ಸ್ಟಡರ್ ಪ್ರಸ್ತಾವನೆಗೆ ತಂದ ಈ ಮಸೂದೆಯು ಹೆತ್ತವರೇ ಆದರೂ ತಮ್ಮ ಮಕ್ಕಳ ಚಿತ್ರಗಳ ಮೇಲೆ ಅವರಿಗೂ ಸಂಪೂರ್ಣ ಹಕ್ಕಿರುವುದಿಲ್ಲ ಎಂದು ತಿಳಿಸಿದ್ದು, ಫ್ರೆಂಚ್ ರಾಷ್ಟ್ರೀಯ ಸದನದ ಅನುಮೋದನೆ ಪಡೆದಿದೆ.
13 ವರ್ಷ ವಯಸ್ಸಿನ ಸರಾಸರಿ ಹದಿಹರೆಯದ ಮಗುವೊಂದಕ್ಕೆ ತನ್ನದೇ ಆದ 1,300 ಫೋಟೋಗಳು ಅಂತರ್ಜಾಲದಲ್ಲಿ ತೇಲಾಡುತ್ತಿವೆ ಎಂದ ಸ್ಟಡರ್, ಈ ಚಿತ್ರಗಳನ್ನು ಮಕ್ಕಳ ಪೋರ್ನೋಗ್ರಾಫಿಗೆ ಅಥವಾ ಶಾಲೆಯಲ್ಲಿ ಬೆದರಿಸಲು ಬಳಸಬಹುದಾದ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ.
ಮಕ್ಕಳ ಪೋರ್ನೋಗ್ರಾಫಿ ಫೋರಂಗಳಲ್ಲಿ ಕಂಡು ಬರುವ ಮಕ್ಕಳ ಪೈಕಿ 50%ನಷ್ಟು ಮಕ್ಕಳ ಚಿತ್ರಗಳನ್ನು ಅವರ ಹೆತ್ತವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವಂಥದ್ದಾಗಿವೆ ಎನ್ನುತ್ತಾರೆ ಸ್ಟಡರ್. ಮಕ್ಕಳ ಹಕ್ಕುಗಳ ಸಂಬಂಧ ರಚಿಸಲಾದ ವಿಶೇಷ ಸಮಿತಿಯ ಸದಸ್ಯರಾಗಿದ್ದಾರೆ ಸ್ಟಡರ್.