ನವದೆಹಲಿ: ರೋಹ್ಟಕ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ರೈಲಿನ ಕೋಚ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಸೋಮವಾರ ಈ ಘಟನೆ ಸಂಭವಿಸಿದ್ದು, ಸ್ಫೋಟದಲ್ಲಿ ನಾಲ್ವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ನಂತರ ರೈಲ್ವೇ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲು ದೆಹಲಿಯ ಫೋರೆನ್ಸಿಕ್ ತಂಡದೊಂದಿಗೆ ಸ್ಥಳವನ್ನು ಪರಿಶೀಲಿಸಿದರು.
ಸಂಪ್ಲಾ ನಿಲ್ದಾಣದ ಬಳಿ ಸ್ಫೋಟ
ಸಂಜೆ 4:20 ರ ಸುಮಾರಿಗೆ ರೋಹ್ಟಕ್ ನಿಲ್ದಾಣದಿಂದ ರೈಲು ಹೊರಟು ಸಂಪ್ಲಾ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಸ್ಫೋಟ ಸಂಭವಿಸಿದೆ. ಕೋಚ್ನಲ್ಲಿ ಹಠಾತ್ ಸ್ಫೋಟ ಸಂಭವಿಸಿದ್ದು, ರೈಲು ನಿರ್ವಾಹಕರು ಸ್ಟೇಷನ್ ಮಾಸ್ಟರ್ಗೆ ತಿಳಿಸಿದಾಗ ರೈಲನ್ನು ತಕ್ಷಣವೇ ನಿಲ್ಲಿಸಲಾಯಿತು. ಸಂಪ್ಲಾದಲ್ಲಿನ ಸ್ಥಳೀಯ ಪೊಲೀಸರು ಮತ್ತು ರೋಹ್ಟಕ್ನ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್ಪಿಎಫ್) ಧಾವಿಸಿ ಬಂದು ಪರಿಶೀಲಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಫೋಟಕ್ಕೆ ಕಾರಣ
ಪ್ರಯಾಣಿಕರೊಬ್ಬರು ಪ್ಲಾಸ್ಟಿಕ್ ಚೀಲದಲ್ಲಿ ಹೆಚ್ಚಿನ ಪ್ರಮಾಣದ ಗಂಧಕ ಮತ್ತು ಪೊಟ್ಯಾಶ್ ಅನ್ನು ಸಾಗಿಸಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ, ಇದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕೋಚ್ನೊಳಗೆ ಬೆಂಕಿಯನ್ನು ಉಂಟುಮಾಡಿದೆ ಎನ್ನಲಾಗಿದ್ದು, ತನಿಖೆ ನಡೆಸಲಾಗಿದೆ.