ಸಿಂಗಾಪುರದ ಮೃಗಾಲಯದಲ್ಲಿ ನಾಲ್ಕು ಸಿಂಹಗಳು ಕೊರೊನಾ ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣದಿಂದಾಗಿ ಕೋವಿಡ್ ಸೋಂಕಿಗೆ ಒಳಗಾಗಿವೆ ಎಂದು ವರದಿಯಾಗಿದೆ.
ಸೋಂಕಿತ ಸಿಂಹಗಳ ಆರೋಗ್ಯ ಸ್ಥಿರವಾಗಿದ್ದು, ಆಹಾರವನ್ನು ಸೇವಿಸುತ್ತಿವೆ ಎಂದು ಮಂಡೈ ವೈಲ್ಡ್‌ಲೈಫ್ ಗ್ರೂಪ್‌ನ ಸಂರಕ್ಷಣೆ, ಸಂಶೋಧನೆ ಮತ್ತು ಪಶುವೈದ್ಯಕೀಯ ಉಪಾಧ್ಯಕ್ಷ ಡಾ. ಸೊಂಕಾ ಲ್ಯೂಸ್ ಮಾಹಿತಿ ನೀಡಿದ್ದಾರೆ.
ಈ ನಡುವೆ ಸಿಂಗಾಪುರದಲ್ಲಿ ಕಳೆದ 24 ಗಂಟೆಗಳಲ್ಲಿ 3397 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,24,200 ತಲುಪಿದೆ. ಕಳೆದ 24 ಗಂಟೆಗಳಲ್ಲಿ 12 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಒಟ್ಟು ಸಾವಿಗೀಡಾದವರ ಸಂಖ್ಯೆ 523 ಆಗಿದೆ.
ಜನಪ್ರಿಯ ಪ್ರವಾಸಿ ತಾಣವಾದ ನೈಟ್ ಸಫಾರಿಯ ಏಷ್ಯಾಟಿಕ್ ಸಿಂಹಗಳು ಕೋವಿಡ್ ಸೋಂಕಿಗೆ ಒಳಗಾಗಿದೆ ಎಂದು ವರದಿಯಾಗಿದೆ. ಸೋಂಕಿತ ಸಿಂಹಗಳು ಶೀತ, ಕೆಮ್ಮು ಸೇರಿದಂತೆ ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿವೆ ಎಂದು ತಿಳಿದು ಬಂದಿದೆ.
ನಾಲ್ಕು ಸಿಂಹಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಳಿಕ ಅಲರ್ಟ್ ಆದ ಮೃಗಾಲಯದ ಸಿಬ್ಬಂದಿ ಮೃಗಾಲಯದಲ್ಲಿರುವ ಇತರೆ ಒಂಬತ್ತು ಏಷ್ಯಾಟಿಕ್ ಸಿಂಹಗಳು ಹಾಗೂ ಐದು ಆಫ್ರಿಕನ್ ಸಿಂಹಗಳನ್ನು ಐಸೋಲೇಟ್ ಮಾಡಿದ್ದಾರೆ ಎನ್ನಲಾಗಿದೆ.