ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಈ ವಾರ ದಾಖಲೆ ಪ್ರಮಾಣದ ಮೆಣಸಿನ ಕಾಯಿ ಮಾರಾಟಕ್ಕೆ ಬಂದಿದೆ.
ಒಂದೇ ದಿನ ಸುಮಾರು 4 ಲಕ್ಷ ಚೀಲಗಳು ಮಾರಾಟಕ್ಕೆ ಬಂದಿದ್ದು, ಮಾರುಕಟ್ಟೆಯಲ್ಲಿ ಜಾಗ ಇಲ್ಲದಂತಾಗಿ ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಚೀಲಗಳನ್ನು ಇಳಿಸಲಾಗಿದೆ. ಮಾರುಕಟ್ಟೆಯಲ್ಲಿ ಸುಮಾರು 3,30,000 ಚೀಲಗಳನ್ನು ಇಳಿಸಿಕೊಂಡಿದ್ದು, ಕ್ರೀಡಾಂಗಣದಲ್ಲಿ ಉಳಿದ ಚೀಲಗಳನ್ನು ಇಳಿಸಲಾಗಿದೆ.
ಎರಡು ದಿನಗಳ ಕಾಲ ರೈತರ ಮೆಣಸಿನ ಕಾಯಿಗೆ ಲಾಟ್ ನಿರ್ಮಿಸಿ ದರ ನಿಗದಿ ಮಾಡಲಾಗಿದೆ. ಈ ವರ್ಷ 3.3 ಲಕ್ಷ ಚೀಲಗಳನ್ನು ಮಾರುಕಟ್ಟೆಯಲ್ಲಿ ಉಳಿದ 60 ಸಾವಿರಕ್ಕೂ ಅಧಿಕ ಚೀಲಗಳನ್ನು ಕ್ರೀಡಾಂಗಣದಲ್ಲಿ ಇಳಿಸಲಾಗಿದೆ. ಮಾರುಕಟ್ಟೆ ಆರಂಭವಾದಾಗಿನಿಂದ ಇದೊಂದು ದಾಖಲೆಯಾಗಿದೆ ಎಂದು ಹೇಳಲಾಗಿದೆ.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ರೈತರ ನೆಚ್ಚಿನ ತಾಣವಾಗಿದೆ. ಪಾರದರ್ಶಕತೆ, ಇ- ಟೆಂಡರ್ ವ್ಯವಸ್ಥೆ, ಮೊದಲಾದ ಕಾರಣಗಳಿಂದ ದೂರದ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯ ರೈತರು ಮೆಣಸಿನಕಾಯಿ ಮಾರಾಟಕ್ಕೆ ತರುತ್ತಾರೆ. ಪ್ರತಿ ವರ್ಷ ಸುಮಾರು 2000 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ. ಈ ವರ್ಷ 2500 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುವ ಅಂದಾಜಿದೆ.