ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುರಾದ್ ನಗರ ಬಳಿ ಟ್ರಕ್‌ಗೆ ಹಿಂದಿನಿಂದ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ.
ಪೆರಿಫೆರಲ್ ಎಕ್ಸ್ ಪ್ರೆಸ್‌ವೇ ಯಲ್ಲಿ ಮಧ್ಯರಾತ್ರಿ 1:15 ರ ಸುಮಾರಿಗೆ ಕೆಲವು ಪ್ರಯಾಣಿಕರು ವಿರಾಮಕ್ಕಾಗಿ ಇಳಿದಾಗ ಈ ಘಟನೆ ಸಂಭವಿಸಿದೆ. ಆದರೆ, ಹಿಂದಿನಿಂದ ಬರುತ್ತಿದ್ದ ಟ್ರಕ್ ಈಶರ್ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರಣ ದುರಂತ ಸಂಭವಿಸಿದೆ.
ಘಟನೆಯ ಕುರಿತು ಮಾತನಾಡಿದ ಅಧಿಕಾರಿಗಳು, ಹರ್ಯಾಣದ ಸೋನಿಪತ್‌ನಿಂದ ಹರ್ದೋಯ್‌ಗೆ ಒಟ್ಟು 35 ಇಟ್ಟಿಗೆ ಗೂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ಗೆ ಹಿಂದಿನಿಂದ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಮೃತರನ್ನು ಮಾಯಾದೇವಿ(45), ಇರ್ಷಾದ್(30), ನಜುಮಾನ್(60), ಶಮೀನಾ (20) ಎಂದು ಗುರುತಿಸಲಾಗಿದೆ. ಎಲ್ಲರೂ ಹರ್ದೋಯ್ ಜಿಲ್ಲೆಯ ನಿವಾಸಿಗಳು. ಅಪಘಾತದಲ್ಲಿ ಇತರ 18 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಿಯಾಬಾದ್ ಟ್ರಾಫಿಕ್ ಹೆಚ್ಚುವರಿ ಡಿಸಿಪಿ ವೀರೇಂದ್ರ ಕುಮಾರ್ ಹೇಳಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಚಿಕಿತ್ಸೆಗಾಗಿ ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ತೀವ್ರವಾಗಿ ಗಾಯಗೊಂಡ ಒಂಬತ್ತು ವ್ಯಕ್ತಿಗಳನ್ನು ವಿಶೇಷ ವೈದ್ಯಕೀಯ ಆರೈಕೆಗಾಗಿ ದೆಹಲಿಯ GTB ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.