ದುಬೈ: ದುಬೈನ ದೇರಾ ಬುರ್ಜ್ ಮುರಾರ್ ಪ್ರದೇಶದ ಅಪಾರ್ಟ್ ಮೆಂಟ್ ನಲ್ಲಿ ಶನಿವಾರ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಭಾರತೀಯರು ಸೇರಿದಂತೆ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ ಕೇರಳ ಮತ್ತು ತಮಿಳುನಾಡಿನ ತಲಾ ಇಬ್ಬರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳ ಮೂಲದ ರಿಜೇಶ್(38) ಮತ್ತು ಅವರ ಪತ್ನಿ ಜಿಶಿ(32) ಎಂದು ಗುರುತಿಸಲಾಗಿದೆ. ಅವರು ಮಲಪ್ಪುರಂ ಮೂಲದವರಾಗಿದ್ದು, ರಿಜೇಶ್ ಟ್ರಾವೆಲ್ ಕಂಪನಿಯ ಉದ್ಯೋಗಿಯಾಗಿದ್ದು, ಜಿಶಿ ಕ್ರೆಸೆಂಟ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇನ್ನು ಇಬ್ಬರು ತಮಿಳುನಾಡು ಮೂಲದ ಅಬ್ದುಲ್ ಖಾದರ್ ಮತ್ತು ಸಲಿಯಾಕುಂಡ್ ಕೂಡ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.
ಸಂತ್ರಸ್ತರನ್ನು ಗುರುತಿಸಲು ಸಹಾಯ ಮಾಡಿದ ಕೇರಳದ ಸಾಮಾಜಿಕ ಕಾರ್ಯಕರ್ತ ನಾಸೀರ್ ವತನಪಲ್ಲಿ, ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ದಂಪತಿಗಳು ಮತ್ತು ತಮಿಳುನಾಡಿನ ಇಬ್ಬರು ಪುರುಷರು, 3 ಪಾಕಿಸ್ತಾನಿ ಸೋದರಸಂಬಂಧಿಗಳು ಮತ್ತು ನೈಜೀರಿಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿ ಅವಘಡದ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.